
ಚಾಮರಾಜನಗರ: ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಇಂದು ಶ್ರೀ ಭಗೀರಥ ಮಹರ್ಷಿ ಜಯಂತಿಯನ್ನು ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಗಂಗೆಯನ್ನು ಭೂಲೋಕಕ್ಕೆ ತಂದು ಮಾನವಕುಲದ ಕಲ್ಯಾಣಕ್ಕಾಗಿ ಅಪಾರ ತಪಸ್ಸು ಮಾಡಿದ ಮಹಾನ್ ಋಷಿ ಭಗೀರಥ ಮಹರ್ಷಿಯನ್ನು ಸ್ಮರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅವರ ತ್ಯಾಗ, ಪರಿಶ್ರಮ, ಧರ್ಮನಿಷ್ಠೆ ಹಾಗೂ ಸಮಾಜಮುಖಿ ಆದರ್ಶಗಳು ಪ್ರತಿಯೊಬ್ಬರ ಜೀವನಕ್ಕೂ ಪ್ರೇರಣೆಯಾಗಲಿ ಎಂದು ಗ್ರಾಮಸ್ಥರು ಆಶಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ಶ್ರೀ ಭಗೀರಥ ಮಹರ್ಷಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅಮಚವಾಡಿ ಯುವಕರ ಸಂಘದ ಅಧ್ಯಕ್ಷ ರಘು ಎಂ. ಹಾಗೂ ಸದಸ್ಯರಾದ ಸುನೀಲ್, ರವಿ, ಮಹೇಶ್, ನಿಂಗರಾಜು, ರಾಚಪ್ಪಾಜಿ, ಮಂಜು, ಜೀವನ ಸೇರಿದಂತೆ ಇನ್ನಿತರ ಯುವಕರು ಸಕ್ರಿಯವಾಗಿ ಭಾಗವಹಿಸಿದ್ದರು. ಅಲ್ಲದೆ ಊರಿನ ಯಜಮಾನರು, ಹಿರಿಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.




