
ಶೃಂಗೇರಿ: ಶೃಂಗೇರಿಯ ಜಯ ಭಾರತೀ ವಿದ್ಯಾಲಯದಲ್ಲಿ ಶ್ರೀ ಶಾರದಾ ಪೀಠಂ, ಶೃಂಗೇರಿ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನ ಹಾಗೂ ಶಾಲಾ ವಾರ್ಷಿಕ ಶೈಕ್ಷಣಿಕ ಸೌಲಭ್ಯಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಡಾ. ಹೆಚ್.ಜಿ. ಲಕ್ಷ್ಮೀನಾರಾಯಣ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಹಾಗೂ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ಸೌಲಭ್ಯಗಳ ಉದ್ಘಾಟಕರಾಗಿ ಶ್ರೀಮಠ, ಶೃಂಗೇರಿಯ ಅಕೌಂಟ್ಸ್ ಅಂಡ್ ಫೈನಾನ್ಸ್ ವಿಭಾಗದ ಜನರಲ್ ಮ್ಯಾನೇಜರ್ ಶ್ರೀ ಸತೀಶ್ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ಸೌಲಭ್ಯಗಳ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ವಿನಯ್ ಸಿ.ಜಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮದ ಔಚಿತ್ಯವನ್ನು ಸಭೆಗೆ ವಿವರಿಸಿದರು. ಇದೇ ವೇಳೆ ಶ್ರೀ ಶಾರದಾ ಪೀಠಂ ವತಿಯಿಂದ ಶಾಲೆಗೆ ಒದಗಿಸಲಾಗುವ ವಾರ್ಷಿಕ ಶೈಕ್ಷಣಿಕ ಸೌಲಭ್ಯಗಳ ಭಾಗವಾಗಿ ಸಾಂಕೇತಿಕವಾಗಿ ಶಾಲೆಯ ವಿಭಾಗವಾರು ವಿದ್ಯಾರ್ಥಿಗಳಿಗೆ ಶ್ರೀ ಸತೀಶ್ ಅವರು ನೋಟ್ಬುಕ್ಗಳನ್ನು ವಿತರಿಸಿದರು. ವಿದ್ಯಾರ್ಥಿನಿಯರಾದ ಅವನಿ ಕಾರ್ಯಕ್ರಮವನ್ನು ನಿರೂಪಿಸಿದರೆ, ಸಾವರ್ಣಿ ಸ್ವಾಗತಿಸಿದರು ಹಾಗೂ ಅನಘ ವಂದನಾರ್ಪಣೆ ಸಲ್ಲಿಸಿದ್ದು, ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.




