
ಶಿವಮೊಗ್ಗ: ಕರ್ನಾಟಕದಲ್ಲಿ ಈಗಾಗಲೇ ಕಲಬುರಗಿ ಹಾಗೂ ಧಾರವಾಡ ಹೈಕೋರ್ಟ್ ಪೀಠಗಳು ಕಾರ್ಯನಿರ್ವಹಿಸುತ್ತಿದ್ದು, ಕರಾವಳಿ ಹಾಗೂ ಮಲೆನಾಡು ಭಾಗದ ಜನರಿಗೆ ನ್ಯಾಯಾಂಗ ಸೇವೆಗಳನ್ನು ಮತ್ತಷ್ಟು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಹೊಸ ಹೈಕೋರ್ಟ್ ಪೀಠ ಸ್ಥಾಪನೆ ಮಾಡಲು ಸರ್ಕಾರ ನಿರ್ಧರಿಸಿದೆ. ಆದರೆ ಈ ನಿರ್ಧಾರಕ್ಕೆ ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಒಂದು ಹೈಕೋರ್ಟ್ ಪೀಠಕ್ಕಾಗಿ ಮೂರು ಜಿಲ್ಲೆಗಳ ನಡುವೆ ಹಗ್ಗಜಗ್ಗಾಟ ಆರಂಭವಾಗಿದೆ. ಭೌಗೋಳಿಕವಾಗಿ ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಸಂಚರಿಸುವುದೇ ಕಷ್ಟಕರವಾಗಿದ್ದು, ಅಲ್ಲಿನ ಜನರು ಆರೋಗ್ಯ, ಶಿಕ್ಷಣ ಹಾಗೂ ಉದ್ಯೋಗ ಸೇರಿದಂತೆ ಅನೇಕ ಅಗತ್ಯಗಳಿಗಾಗಿ ಬೇರೆ ಜಿಲ್ಲೆಗಳನ್ನೇ ಅವಲಂಬಿಸಿದ್ದಾರೆ. ಜಿಲ್ಲೆಯಲ್ಲಿ 11 ಬಾರ್ ಅಸೋಸಿಯೇಷನ್ಗಳು ಇದ್ದು, ಉಡುಪಿಯಲ್ಲಿ 4 ಹಾಗೂ ಮಂಗಳೂರಿನಲ್ಲಿ 6 ಬಾರ್ ಅಸೋಸಿಯೇಷನ್ಗಳಿವೆ. ಹೈಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣಗಳ ಸಂಖ್ಯೆಯಲ್ಲೂ ಉತ್ತರ ಕನ್ನಡ ಜಿಲ್ಲೆಯ ಪಾಲು ಹೆಚ್ಚಿದೆ. ಹೀಗಾಗಿ ಮಂಗಳೂರಿನ ಬದಲು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಿದರೆ ಶಿವಮೊಗ್ಗ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೂ ಅನುಕೂಲವಾಗಲಿದೆ ಎಂದು ಕಾರವಾರ ವಕೀಲರ ಸಂಘ ಆಗ್ರಹಿಸಿದೆ. ಒಂದು ವೇಳೆ ಹೊಸ ಪೀಠ ಸ್ಥಾಪನೆ ಸಾಧ್ಯವಾಗದಿದ್ದರೆ ಉತ್ತರ ಕನ್ನಡ ಜಿಲ್ಲೆಯನ್ನು ಈ ಹಿಂದಿನಂತೆ ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯಲ್ಲಿಯೇ ಮುಂದುವರಿಸಬೇಕು ಎಂದು ಒತ್ತಾಯಿಸಿದೆ. ಮತ್ತೊಂದೆಡೆ ಕರಾವಳಿಯ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳು ಬೆಂಗಳೂರಿನ ಹೈಕೋರ್ಟ್ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಕರಾವಳಿ ಭಾಗಕ್ಕೆ ಪ್ರತ್ಯೇಕ ಹೈಕೋರ್ಟ್ ಪೀಠ ಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದು, ಅದರ ಫಲವಾಗಿ ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವು ತೋರಿದೆ. ಈ ಸಂಬಂಧ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಪತ್ರ ಬರೆದು ಅಗತ್ಯ ಮೂಲಸೌಕರ್ಯ ಕಲ್ಪಿಸುವ ಭರವಸೆಯನ್ನೂ ನೀಡಿದ್ದು, ಸ್ಥಳ ಪರಿಶೀಲನೆಯೂ ನಡೆದಿದೆ. ಆದರೆ ಮಂಗಳೂರಿನಲ್ಲಿ ಪೀಠ ಸ್ಥಾಪನೆ ಮಾಡುವ ಬದಲು ಹೊನ್ನಾವರದಲ್ಲಿ ಸ್ಥಾಪಿಸಬೇಕು ಎಂಬುದು ಉತ್ತರ ಕನ್ನಡ ಜಿಲ್ಲೆಯ ವಕೀಲರ ಪ್ರಮುಖ ಬೇಡಿಕೆಯಾಗಿದೆ. ಇದೇ ವೇಳೆ ಶಿವಮೊಗ್ಗ ಜಿಲ್ಲೆಯ ವಕೀಲರ ಸಂಘವೂ ಮಂಗಳೂರಿನಲ್ಲಿ ಪೀಠ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ಮಲೆನಾಡು ಭಾಗದ ಕೇಂದ್ರ ಸ್ಥಾನವಾಗಿರುವ ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದೆ. ಹೀಗಾಗಿ ಒಂದೇ ಹೈಕೋರ್ಟ್ ಪೀಠಕ್ಕಾಗಿ ಮಂಗಳೂರು, ಹೊನ್ನಾವರ ಹಾಗೂ ಶಿವಮೊಗ್ಗ ನಡುವೆ ತೀವ್ರ ಪೈಪೋಟಿ ಉಂಟಾಗಿದ್ದು, ಉತ್ತರ ಕನ್ನಡ ಜಿಲ್ಲೆಯನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಿದರೆ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ವಕೀಲರ ಸಂಘ ಎಚ್ಚರಿಕೆ ನೀಡಿದೆ. ಸರ್ಕಾರ ಅಂತಿಮವಾಗಿ ಯಾವ ಜಿಲ್ಲೆಯನ್ನು ಆಯ್ಕೆ ಮಾಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.




