
ಕೇಂದ್ರ ಸರ್ಕಾರಿ ಸ್ವಾಮ್ಯದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ ಬಿಎಸ್ಎನ್ಎಲ್ (BSNL) ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ್ದು, ನೇರ ನೇಮಕಾತಿ ಯೋಜನೆಯಡಿ ಖಾಲಿ ಇರುವ 100 ಜೂನಿಯರ್ ಟೆಲಿಕಾಂ ಆಫೀಸರ್ (JTO – Telecom) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಹೊರಡಿಸಿದೆ. ತಾಂತ್ರಿಕ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಹಾಗೂ ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯಡಿ ದೇಶಾದ್ಯಂತ ವಿವಿಧ ವಲಯಗಳಲ್ಲಿ ಒಟ್ಟು 100 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಬಿಎಸ್ಎನ್ಎಲ್ ನೆಟ್ವರ್ಕ್ ವಿಸ್ತರಣೆಯ ಭಾಗವಾಗಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಾಂತ್ರಿಕ ವಿಭಾಗಗಳನ್ನು ಮುನ್ನಡೆಸುವ ಜವಾಬ್ದಾರಿ ಸಿಗಲಿದೆ. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿತ ಇಂಜಿನಿಯರಿಂಗ್ ವಿಭಾಗದಲ್ಲಿ ಬಿಇ (B.E) / ಬಿ.ಟೆಕ್ (B.Tech) ಪದವಿ ಪಡೆದಿರಬೇಕು ಅಥವಾ ಎಂಎಸ್ಸಿ (M.Sc), ಎಂಟೆಕ್ (M.Tech) ಉತ್ತೀರ್ಣರಾಗಿರಬೇಕು. ಜುಲೈ 3, 2026ರ ಅನ್ವಯ ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷ ಹಾಗೂ ಗರಿಷ್ಠ 30 ವರ್ಷಗಳ ನಡುವೆ ಇರಬೇಕು. ಸರ್ಕಾರದ ನಿಯಮಗಳ ಪ್ರಕಾರ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಗರಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ವರ್ಗದ ಅಭ್ಯರ್ಥಿಗಳು 2,000 ರೂ. ಪಾವತಿಸಬೇಕಿದ್ದು, ಎಸ್ಸಿ, ಎಸ್ಟಿ ಹಾಗೂ ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 1,000 ರೂ. ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆಯನ್ನು ಕಂಪ್ಯೂಟರ್ ಆಧಾರಿತ ಆನ್ಲೈನ್ ಲಿಖಿತ ಪರೀಕ್ಷೆ, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ನಡೆಸಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 16,400 ರೂ. ರಿಂದ 40,500 ರೂ.ವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ. ಬಿಎಸ್ಎನ್ಎಲ್ ಜೆಟಿಒ ನೇಮಕಾತಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಜೂನ್ 4, 2026ರಿಂದ ಆರಂಭವಾಗಲಿದ್ದು, ಜುಲೈ 3, 2026 ಕೊನೆಯ ದಿನವಾಗಿರುತ್ತದೆ. ಅರ್ಜಿ ತಿದ್ದುಪಡಿ ಪ್ರಕ್ರಿಯೆ ಜುಲೈ 4ರಿಂದ ಜುಲೈ 11, 2026ರವರೆಗೆ ನಡೆಯಲಿದ್ದು, ಲಿಖಿತ ಪರೀಕ್ಷೆ ಆಗಸ್ಟ್ 2026ರಲ್ಲಿ ನಡೆಯುವ ಸಾಧ್ಯತೆ ಇದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಬಿಎಸ್ಎನ್ಎಲ್ ತಿಳಿಸಿದೆ.




