
ಬೆಂಗಳೂರು: ನಗರದ ಶಿವಾಜಿನಗರ ನಿವಾಸಿ, 74 ವರ್ಷದ ನಿವೃತ್ತ ಶಿಕ್ಷಕಿ ಹಾಗೂ ದುಬೈನಲ್ಲಿ ಶಿಕ್ಷಕಿಯಾಗಿಯೂ ಸೇವೆ ಸಲ್ಲಿಸಿದ್ದ ಲಕ್ಷ್ಮಿ ರಾಮಮೂರ್ತಿ ಅವರು “ಡಿಜಿಟಲ್ ಅರೆಸ್ಟ್” ಹೆಸರಿನ ಸೈಬರ್ ವಂಚನೆಗೆ ಬಲಿಯಾಗಿ ಸುಮಾರು ನಾಲ್ಕು ತಿಂಗಳ ಅವಧಿಯಲ್ಲಿ 24 ಕೋಟಿ ರೂ. ಕಳೆದುಕೊಂಡಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಒಬ್ಬಂಟಿಯಾಗಿ ವಾಸಿಸುತ್ತಿರುವ ಲಕ್ಷ್ಮಿ ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಆರೋಪಿಗಳು ತಾವು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಎಂದು ಪರಿಚಯಿಸಿಕೊಂಡು, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನೀವು ಭಾಗಿಯಾಗಿದ್ದೀರಿ ಹಾಗೂ ಕಣ್ಗಾವಲಿನಲ್ಲಿದ್ದೀರಿ ಎಂದು ಹೆದರಿಸಿ ಡಿಜಿಟಲ್ ಬಂಧನದಲ್ಲಿಟ್ಟಿದ್ದರು. ಕಾನೂನು ಕ್ರಮದ ಭೀತಿಯಿಂದ ಲಕ್ಷ್ಮಿ ಅವರು ಫೆಬ್ರವರಿ 10ರಿಂದ ಮಾರ್ಚ್ 24ರವರೆಗೆ ಹಂತ ಹಂತವಾಗಿ 24 ಕೋಟಿ ರೂ.ಗಳನ್ನು ದೇಶದ ವಿವಿಧ 10 ಬ್ಯಾಂಕ್ಗಳಿಗೆ ಸಂಬಂಧಿಸಿದ 23 ಮ್ಯೂಲ್ ಖಾತೆಗಳಿಗೆ ಒಟ್ಟು 26 ಬಾರಿ ವರ್ಗಾಯಿಸಿದ್ದಾರೆ. ಇತ್ತೀಚೆಗೆ ಅವರು ಒಂದು ಪ್ಲಾಟ್ ಮಾರಾಟ ಮಾಡಿ ದೊಡ್ಡ ಮೊತ್ತದ ಹಣ ಹೊಂದಿರುವುದನ್ನು ತಿಳಿದುಕೊಂಡಿದ್ದ ವಂಚಕರು ಇನ್ನಷ್ಟು ಹಣಕ್ಕಾಗಿ ಒತ್ತಡ ಹೇರಿದ್ದು, 1.3 ಕೆಜಿ ಚಿನ್ನದ ಆಭರಣಗಳನ್ನು ಅಡವಿಡಲು ಸಹ ಪ್ರೇರೇಪಿಸಿದ್ದರು. ಈ ವೇಳೆ ಆಕೆಯ ಅನುಮಾನಾಸ್ಪದ ನಡವಳಿಕೆ ಹಾಗೂ ಪದೇ ಪದೇ ನಡೆಯುತ್ತಿದ್ದ ಭಾರಿ ಮೊತ್ತದ ವಹಿವಾಟುಗಳನ್ನು ಗಮನಿಸಿದ ಖಾಸಗಿ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ ವಂಚನೆ ಬಯಲಾಗಿದೆ. ಬ್ಯಾಂಕ್ಗೆ ಧಾವಿಸಿದ ಪೊಲೀಸರು ಆರಂಭದಲ್ಲಿ ಭಯಭೀತಳಾಗಿದ್ದ ಮಹಿಳೆಯನ್ನು ಸಮಾಧಾನಪಡಿಸಿ ವಿಚಾರಣೆ ನಡೆಸಿದಾಗ ಡಿಜಿಟಲ್ ಅರೆಸ್ಟ್ನ ಸತ್ಯಾಂಶ ಹೊರಬಂದಿದೆ. ಮಹಿಳೆಯ ದೂರಿನ ಮೇರೆಗೆ ತನಿಖೆ ಆರಂಭಿಸಿದ ರಾಜ್ಯ ಸೈಬರ್ ಕಮಾಂಡ್ ಪೊಲೀಸರು ತಾಂತ್ರಿಕ ಮಾಹಿತಿ ಹಾಗೂ ಇತರ ಪುರಾವೆಗಳ ಆಧಾರದಲ್ಲಿ ತಮಿಳುನಾಡಿನ ಈರೋಡ್ನ ಎನ್. ಶಿವಜ್ಞಾನಂ, ಮಹಾರಾಷ್ಟ್ರದ ಮುಂಬೈನ ಅಕ್ಕಚ್ ಮಲ್ಲಿಕ್, ಗುಜರಾತ್ನ ಅಹಮದಾಬಾದ್ನ ಪಾಲಕ್ ಭಾಯ್ ಪಟೇಲ್ ಮತ್ತು ಅಮಿತ್ ನರೇಂದ್ರ ಪಟೇಲ್, ನವದೆಹಲಿಯ ಓಂ ಪ್ರಕಾಶ್ ರಜಪೂತ್ ಹಾಗೂ ಬಿಹಾರದ ಗೌರವ್ ಕುಮಾರ್ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಎನ್ಸಿಆರ್ಪಿ ಪೋರ್ಟಲ್ ಸಹಾಯದಿಂದ ಹಲವು ಮ್ಯೂಲ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಪೊಲೀಸರು 4 ಕೋಟಿ ರೂ.ಗೂ ಅಧಿಕ ಹಣವನ್ನು ಸೀಜ್ ಮಾಡಿದ್ದು, ಆರೋಪಿಗಳಿಂದ 1.46 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಖಾಸಗಿ ಬ್ಯಾಂಕ್ ವ್ಯವಸ್ಥಾಪಕರ ಸಕಾಲಿಕ ಜಾಗರೂಕತೆಯಿಂದ ಮಹಿಳೆ ಇನ್ನಷ್ಟು ಹಣ ಕಳೆದುಕೊಳ್ಳುವುದನ್ನು ತಡೆಯಲು ಸಾಧ್ಯವಾಗಿದ್ದು, ದೇಶವ್ಯಾಪಿ ಸೈಬರ್ ವಂಚನೆ ಜಾಲವೊಂದನ್ನು ಬಯಲಿಗೆಳೆಯಲಾಗಿದೆ.




