
ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ನಿರ್ಮಾಣದ ಸಮೀಕ್ಷೆ ಪೂರ್ಣಗೊಂಡಿದ್ದು, ಫೈನಲ್ ಲೊಕೇಷನ್ ಸರ್ವೆ (FLS) ಅನುಮೋದನೆಗೊಂಡಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಅಮೃತ ಭಾರತ್ ಯೋಜನೆಯಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಬಳಿಕ ಮಾತನಾಡಿದ ಅವರು, 332 ಕಿ.ಮೀ ಉದ್ದದ ಈ ರೈಲು ಮಾರ್ಗಕ್ಕೆ ಸುಮಾರು 3,300 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು, ಯೋಜನೆಗೆ ವೇಗ ನೀಡಲಾಗುತ್ತಿದೆ ಎಂದರು. ಇದೇ ವೇಳೆ ಹಾಸನ-ಮಂಗಳೂರು ನಡುವಿನ 247 ಕಿ.ಮೀ ರೈಲು ಹಳಿ ದ್ವಿಗುಣಗೊಳಿಸುವ 8,300 ಕೋಟಿ ರೂ. ವೆಚ್ಚದ ಯೋಜನೆಯ ಎಫ್ಎಲ್ಸಿ ಪರಿಶೀಲನಾ ಹಂತದಲ್ಲಿದ್ದು, ಮಂಗಳೂರು-ಬೆಂಗಳೂರು ನಡುವೆ ಜೂನ್ನಿಂದ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.





