
ಒಂದು ಪಾರ್ಕಿನಲ್ಲಿ ಪುಟ್ಟ ಮಗುವೊಂದು ವಿಪರೀತ ಹಠ ಮಾಡುತ್ತಿರುತ್ತದೆ. ಅದನ್ನು ಸಮಾಧಾನಪಡಿಸುತ್ತಿರುವ ತಾಯಿ ಆ ಮಗುವಿಗೆ ಜನ್ನಿಫರ್ ರಿಲ್ಯಾಕ್ಸ್ ಪ್ಲೀಸ್ ನೀನು ತಾಳ್ಮೆ ಕಳೆದುಕೊಳ್ಳಬೇಡ… ಬಿ ಕೂಲ್.. ಎಂದು ಹೇಳುತ್ತಿದ್ದರು. ಇದನ್ನು ಗಮನಿಸಿದ ಹಿರಿಯರೊಬ್ಬ್ಬರು ಆಕೆಗೆ ಅಲ್ಲಮ್ಮ ಅಷ್ಟು ಚಿಕ್ಕ ಮಗುವಿಗೆ ನೀನು ಹಾಗೆ ಸಮಾಧಾನ ಮಾಡಿದರೆ ಅದಕ್ಕೆ ಹೇಗೆ ಅರ್ಥವಾಗಬೇಕು ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆ ತಾಯಿ ನೀಡಿದ ಉತ್ತರ ಬಹಳ ಇಂಟ್ರೆಸ್ಟಿಂಗ್ ಆಗಿದೆ. ಆಕೆ ಏನ್ ಹೇಳ್ತಾರೆ ಗೊತ್ತಾ? ಸಾರ್ ನಾನು ಮಗುವಿಗೆ ಸಮಾಧಾನ ಮಾಡ್ತಾ ಇಲ್ಲ, ನಂಗೆ ನಾನು ಸಮಾಧಾನ ಮಾಡ್ಕೋತಾ ಇದೀನಿ.. ಜನ್ನಿಫರ್ ಅಂದ್ರೆ ನಾನೇ ಅದು ನನ್ನ ಹೆಸರು ಅಂತಾಳೆ.
ನೋಡಿ, ಆಕೆಯ ಆ ಮಂತ್ರ ಅದೆಷ್ಟು ಅದ್ಭುತ! ರಚ್ಚೆ ಹಿಡಿದಿರೋ ಮಗುವನ್ನು ಗದರಿಸದಂತೆ, ಹಿಡಿದು ಚಚ್ಚೋ ಹಾಗಾಗದಿರಲು ಆಕೆ ತನಗೆ ತಾನೇ ಹೇಳಿಕೊಳ್ತಾಳೆ ಜೆನಿಫರ್ ರಿಲ್ಯಾಕ್ಸ್! ಇದೇ ಮಂತ್ರ ನಾವು ಕೂಡ ಹೇಳಿಕೊಳ್ಳಬಹುದಲ್ವಾ? ಬೆಳಿಗ್ಗೆ ಎದ್ದಲ್ಲಿಂದ ರಾತ್ರಿ ಬೆಡ್ ಮೇಲೆ ಬೀಳೋ ತನಕ ನಾವು ಅದೆಷ್ಟು ಸಲ ತಾಳ್ಮೆ ಕಳೆದುಕೊಳ್ತೀವಿ ಅಂತ ಯೋಚಿಸಿ ನೋಡಿ. ಬೆಳಿಗ್ಗೆ ಎದ್ದು ಸ್ನಾನಕ್ಕೆ ಅಂತ ಬಾತ್ರೂಮ್ಗೆ ಹೋದ್ರೆ ನಿಮಗಿಂತ ಮುಂಚೆ ತಮ್ಮನೋ, ತಂಗಿಯೋ ಹೋಗಿ ಹಾಡು ಗುನುಗುತ್ತಾ ಸ್ನಾನ ಶುರು ಮಾಡಿರುತ್ತಾರೆ. ಜಸ್ಟ್ ಟೂ ಮಿನಿಟ್ ಕಾಯೋ ಅಷ್ಟರಲ್ಲಿ ನಿಮ್ಮ ತಾಳ್ಮೆ ಕೆಟ್ಟು ಹೋಗುತ್ತೆ. ಥತ್ ನಿಂದು ಯಾವಾಗ್ಲೂ ಇದೇ ಗೋಳು. ಒಂದು ಗಂಟೆಯಾದ್ರೂ ಬರಲ್ಲ, ಬಾ ಬೇಗ ಟೈಮ್ ಆಯ್ತು, ನಾನು ಹೊರಡೋದು ಬೇಡ್ವಾ..? ನಿಂಗೆ ನಾನು ಹೋಗೋ ಟೈಮೇ ಆಗ್ಬೇಕಿತ್ತಾ… ಅಂತ ಕೂಗಿ ಬಾಗಿಲು ಗುದ್ದುತೀರಿ. ಆಗ ನಿಮಗೆ ನೀವೇ ಹೇಳಿಕೊಳ್ಳಿ ಜನ್ನಿಫರ್ ರಿಲ್ಯಾಕ್ಸ್!
ಇವತ್ತು ರಾತ್ರಿ ಕುಳಿತು ಯೋಚಿಸಿ. ನಾನು ಇವತ್ತಿಡೀ ದಿನದಲ್ಲಿ ಎಷ್ಟು ಸಲ ತಾಳ್ಮೆ ಕಳೆದುಕೊಂಡಿದ್ದೇನೆ ಮತ್ತು ಅದು ಎಷ್ಟರಮಟ್ಟಿಗೆ ಅನಿವಾರ್ಯವಾಗಿತ್ತು ಅಂತ. ಕಡಿಮೆ ಅಂದ್ರು ಹತ್ತಕ್ಕಿಂತ ಹೆಚ್ಚು ಬಾರಿ ತಾಳ್ಮೆ ಕಳೆದುಕೊಂಡಿರುತ್ತೀರಿ! ಮತ್ತು ಅದರಲ್ಲಿ ಎಂಟು ಬಾರಿ ಅವಶ್ಯಕತೆ ಇಲ್ಲದೆ ಸುಮ್ನೆ ಆವೇಶಕ್ಕೆ ಒಳಗಾಗಿರುತ್ತೀರಿ. ಬಸ್ಸ್ಟಾಂಡಿನಲ್ಲಿ ಬಸ್ಗೆ ಕಾಯುತ್ತಿದ್ದೀರಿ ಒಮ್ಮಲೇ ಬಂದ ಬಸ್ಗೆ ನುಗ್ಗಿ ಸೀಟು ಗಿಟ್ಟಿಸುವ ತವಕ ಎಲ್ಲರಿಗೂ. ನೀವೂ ಆ ಗುಂಪಿನಲ್ಲೊಬ್ಬರು. ಗಡಿಬಿಡಿಯೊಳಗೆ ಯಾರೋ ಆಕಸ್ಮಾತ್ ನಿಮ್ಮ ಕಾಲು ತುಳಿದು ಬಿಡ್ತಾರೆ. ಏನ್ರೀ ಕಣ್ ಕಾಣ್ಸಲ್ವಾ..? ನೋಡ್ಕೊಂಡು ಬರೋಕಾಗಲ್ವಾ…? ಅಂತ ಕಿರುಚಾಡಿ ಬಿಡ್ತೀರಿ… ನಿಮ್ಮ ಕಿರುಚಾಟದಲ್ಲಿ ಕಾಲು ತುಳಿದಾಗ ಎರಡು ಬಾರಿ ಸಾರಿ ಸರ್ ಅಂತ ಹೇಳಿದ್ದು ಸಹ ನಿಮಗೆ ಕೇಳಿರುವುದಿಲ್ಲ. ನಿಜ ಹೇಳಿ, ನೀವು ಒಂದು ಸಲವಾದರೂ ಹೀಗೆ ಯಾರದ್ದೋ ಕಾಲು ತುಳಿದು ಉಗಿಸಿಕೊಂಡಿದ್ದೀರಿ ತಾನೆ! ಇಂತಹ ಸಂದರ್ಭದಲ್ಲಿಯೇ ಅಲ್ವಾ ನಿಮಗೆ ನೀವು ಹೇಳಿಕೊಳ್ಳಬೇಕಾಗಿದ್ದು ಜನ್ನಿಫರ್ ರಿಲ್ಯಾಕ್ಸ್! ನಮ್ಮ ಅಸಹನೆ ಎಷ್ಟರಮಟ್ಟಿಗೆ ಇರುತ್ತದೆ ಎಂದರೆ ನಾವು ಎಂಜಾಯ್ ಮಾಡಬೇಕಾದಲ್ಲೇ ತಾಳ್ಮೆ ಕಳೆದುಕೊಂಡು ಬಿಡ್ತೀವಿ. ಉದಾಹರಣೆ ನಿಮ್ಮ ಹತ್ರ ಹೆಲ್ಮೆಟ್, ರೈನ್ ಕೋಟ್ ಎಲ್ಲಾವು ಇದೆ. ನೀವು ಹೊರಟು ಬೈಕ್ ಸ್ಟಾರ್ಟ್ ಮಾಡಿದ ತಕ್ಷಣ ಮಳೆ ಶುರುವಾಗುತ್ತೆ! ಥತ್ ದರಿದ್ರ ಮಳೆ ಈಗ್ಲೆ ಬರ್ಬೇಕಾ.. ಹಾಳಾದ್ದು… ಅಂತ ಗೊಣಗುತ್ತೀರಿ. ಅವಶ್ಯಕತೆ ಇದೆಯಾ ಪ್ರೆಂಡ್ಸ್? ಇವತ್ತು ಬೆಳಿಗ್ಗೆ ನಿಮಗೆ ನೀವೇ ಹೇಳಿಕೊಳ್ಳಿ. ನೋಡು ದೋಸ್ತ್ ಇವತ್ತು ನೀನು ತಾಳ್ಮೆ ಕಳೆದುಕೊಳ್ಳೋ ಹಾಗಿಲ್ಲ. ಏನೇ ಆದ್ರೂ ಕೂಲ್ ಆಗಿರಬೇಕು. ಜೆನಿಫರ್ ರಿಲ್ಯಾಕ್ಸ್ ಅಂತ ಪದೇ ಪದೇ ಹೇಳಿಕೊಳ್ತಾ ಇರ್ಬೇಕು. ನಿಮ್ಮಲ್ಲಿನ ಬದಲಾವಣೆಯ ಸಂತೋಷವನ್ನ ನಂಗೆ ಹೇಳಿ.





