
ಚಿಕ್ಕಮಗಳೂರು: ಪ್ರವಾಸಿಗರ ಸ್ವರ್ಗವೆಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾವಿರಾರು ಪ್ರವಾಸಿಗರ ಆಗಮನದಿಂದ ಹೋಂ ಸ್ಟೇ, ರೆಸಾರ್ಟ್ ಹಾಗೂ ಹೋಟೆಲ್ಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅನೇಕ ಸಂಸ್ಥೆಗಳು ಇನ್ನೂ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸದೇ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವುದು ಜಿಲ್ಲಾಡಳಿತ ಹಾಗೂ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಗಮನಕ್ಕೆ ಬಂದಿದ್ದು, ಇದೀಗ ಕಠಿಣ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ. ಕರ್ನಾಟಕ ಟೂರಿಸಂ ಟ್ರೇಡ್ (ಫೆಸಿಲಿಟೇಶನ್ ಅಂಡ್ ರೆಗ್ಯುಲೇಶನ್) ಆಕ್ಟ್ 2015ರ ಸೆಕ್ಷನ್ 8 ಪ್ರಕಾರ ಎಲ್ಲಾ ಹೋಂ ಸ್ಟೇ, ರೆಸಾರ್ಟ್ ಮತ್ತು ಹೋಟೆಲ್ಗಳು ಪ್ರವಾಸೋದ್ಯಮ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕಿದ್ದು, ಈಗಾಗಲೇ ಅನುಮೋದನೆ ಪಡೆದಿದ್ದರೂ ಪರವಾನಿಗೆ ಅವಧಿ ಮುಗಿದು ನವೀಕರಣ ಮಾಡಿಸದಿದ್ದರೆ ಅವುಗಳನ್ನೂ ಅನಧಿಕೃತವೆಂದೇ ಪರಿಗಣಿಸಲಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ನೋಂದಣಿ ಇಲ್ಲದೇ ವ್ಯವಹಾರ ನಡೆಸಿದರೆ ಮೊದಲ ಬಾರಿ ₹5,000 ದಂಡ ವಿಧಿಸಲಾಗುತ್ತಿದ್ದು, ಮರುಕಳಿಸಿದರೆ ಹೆಚ್ಚಿನ ದಂಡ ಹಾಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ನೋಂದಣಿಗೆ ಎರಡು ಮಾರ್ಗಗಳಿದ್ದು, ಆನ್ಲೈನ್ ಮೂಲಕ Karnataka Tourism Official Website ವೆಬ್ಸೈಟ್ನ ಹೋಂ ಸ್ಟೇ ರಿಜಿಸ್ಟ್ರೇಶನ್ ವಿಭಾಗದಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಆಫ್ಲೈನ್ನಲ್ಲಿ ಚಿಕ್ಕಮಗಳೂರು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಪಡೆದು ಸಲ್ಲಿಸಬಹುದು. ಅರ್ಜಿ ಪರಿಶೀಲನೆ ಬಳಿಕ ಸ್ಥಳ ತಪಾಸಣೆ ನಡೆಸಿ ಅನುಮೋದನೆ ಸಿಕ್ಕ ನಂತರ ಸರ್ಟಿಫಿಕೇಟ್ ನೀಡಲಾಗುತ್ತದೆ. ನೋಂದಣಿಗೆ ಖಾತಾ, ಪಟ್ಟಾ, ಸ್ಥಳ ಮತ್ತು ರಸ್ತೆ ವಿವರಗಳಂತಹ ಆಸ್ತಿ ದಾಖಲೆಗಳು, ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಯ NOC, ಮಾಲೀಕರ ಆಧಾರ್ ಹಾಗೂ ಪ್ಯಾನ್ ಕಾರ್ಡ್, ಹೋಂ ಸ್ಟೇ ಮತ್ತು ಸೌಲಭ್ಯಗಳ ಫೋಟೋಗಳು, CCTV ಹಾಗೂ ಅಗ್ನಿಶಾಮಕ ಸುರಕ್ಷತಾ ಕ್ರಮಗಳ ಮಾಹಿತಿ, ತುರ್ತು ಸಂಪರ್ಕ ವಿವರಗಳು ಮತ್ತು ಅನ್ವಯವಾದರೆ GST ಹಾಗೂ ಇತರೆ ಲೈಸೆನ್ಸ್ ದಾಖಲೆಗಳನ್ನು ಸಲ್ಲಿಸಬೇಕು. ನೋಂದಣಿ ಮಾಡಿಸಿಕೊಂಡರೆ ಕಾನೂನು ರಕ್ಷಣೆ, ಸರ್ಕಾರಿ ಯೋಜನೆಗಳ ಸೌಲಭ್ಯ, ರಿಯಾಯಿತಿ, ಅಧಿಕೃತ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಲಿಸ್ಟಿಂಗ್ ಹಾಗೂ ಪ್ರವಾಸಿಗರ ವಿಶ್ವಾಸ ಗಳಿಸುವ ಅವಕಾಶ ಸಿಗುತ್ತದೆ ಎಂದು ಇಲಾಖೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಕಚೇರಿ ಸಂಖ್ಯೆ 08262-228493 ಅಥವಾ ರಾಜ್ಯ ಮಟ್ಟದ ಸಹಾಯವಾಣಿ +91-80-2235-2828 ಹಾಗೂ info@karnatakatourism.org ಸಂಪರ್ಕಿಸಬಹುದಾಗಿದೆ. ಕೊಡಗಿನಲ್ಲಿ ನಡೆದ ಇತ್ತೀಚಿನ ಘಟನೆಗಳ ಬಳಿಕ ರಾಜ್ಯಾದ್ಯಂತ ಕಠಿಣ ಕ್ರಮಗಳು ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ತಡ ಮಾಡದೇ ನೋಂದಣಿ ಮಾಡಿಸಿಕೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಮನವಿ ಮಾಡಿದೆ.



