
ಬೆಂಗಳೂರು : ಮೇ 20ರಂದು ಸಾರಿಗೆ ನೌಕರರು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆ ಕೆಎಸ್ಆರ್ಟಿಸಿ ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಯಾವುದೇ ನೌಕರರು ಮುಷ್ಕರದಲ್ಲಿ ಭಾಗವಹಿಸಬಾರದು ಹಾಗೂ ಮುಷ್ಕರಕ್ಕೆ ಬೆಂಬಲ ಸೂಚಿಸಬಾರದು ಎಂದು ಆದೇಶಿಸಿದೆ. ಬುಧವಾರ ಕರ್ತವ್ಯಕ್ಕೆ ಗೈರಾದರೆ ‘ನೋ ವರ್ಕ್ ನೋ ಪೇ’ ನಿಯಮ ಜಾರಿಯಾಗಲಿದೆ ಎಂದು ಸಿಬ್ಬಂದಿಗೆ ಎಚ್ಚರಿಕೆ ನೀಡಿರುವ ಕೆಎಸ್ಆರ್ಟಿಸಿ ಎಂಡಿ ಅಕ್ರಂಪಾಷಾ, ಮುಷ್ಕರದಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯಾವುದೇ ರೀತಿಯ ರಜೆ ಮಂಜೂರು ಮಾಡಬಾರದು, ಅಗತ್ಯವಿದ್ದಲ್ಲಿ ನೌಕರರ ವಾರದ ರಜೆಯನ್ನೂ ರದ್ದುಪಡಿಸಿ ಕರ್ತವ್ಯಕ್ಕೆ ನಿಯೋಜಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಸಾರಿಗೆ ಸಂಸ್ಥೆಗಳು ಜನಸಾಮಾನ್ಯರಿಗೆ ಅಗತ್ಯ ಸಾರ್ವಜನಿಕ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ ‘ಕರ್ನಾಟಕ ಅಗತ್ಯ ಸೇವಾ ನಿರ್ವಹಣೆ ಕಾಯಿದೆ-2013’ ಜಾರಿಯಲ್ಲಿದ್ದು, ಅದರ ಪ್ರಕಾರ ಸಾರಿಗೆ ನಿಗಮ ನೌಕರರು ಮುಷ್ಕರ ನಡೆಸುವಂತಿಲ್ಲ ಹಾಗೂ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಮುಷ್ಕರಕ್ಕೆ ಪ್ರಚೋದನೆ ನೀಡುವಂತಿಲ್ಲ ಎಂದು ಕೆಎಸ್ಆರ್ಟಿಸಿ ತಿಳಿಸಿದೆ. ಮತ್ತೊಂದೆಡೆ, ಸಾರಿಗೆ ಸಂಘಟನೆಗಳು ಮೇ 19ರ ಮಧ್ಯಾಹ್ನದವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದು, ಆ ಬಳಿಕ ಮಾತುಕತೆಗೆ ಆಹ್ವಾನಿಸಿದರೂ ಭಾಗವಹಿಸುವುದಿಲ್ಲ ಎಂದು ಖಡಕ್ ಸಂದೇಶ ರವಾನಿಸಿವೆ. ಪ್ರತಿ ಬಾರಿ ಮುಷ್ಕರಕ್ಕೂ ಮುನ್ನ ಕೊನೆಯ ಕ್ಷಣದಲ್ಲಿ ಸರ್ಕಾರ ಮಾತುಕತೆಗೆ ಕರೆಯುತ್ತಿದ್ದರೂ, ಈ ಬಾರಿ ಅಂತಹ ಅವಕಾಶ ನೀಡಬಾರದು ಎಂಬ ನಿರ್ಧಾರವನ್ನು ಸಂಘಟನೆಗಳು ಕೈಗೊಂಡಿವೆ.




