
ಚಿಕ್ಕಮಗಳೂರು: ನೀಟ್ ಪರೀಕ್ಷೆ ರದ್ದು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎನ್.ಎಸ್.ಯು.ಐ. ಕಾರ್ಯಕರ್ತರು ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆ ನಡೆಸಿದ್ದು, ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ. ನಗರಸಭೆ ಆವರಣದಲ್ಲಿರುವ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕಚೇರಿ ಎದುರು ಸೇರಿದ್ದ 20ಕ್ಕೂ ಹೆಚ್ಚು ಎನ್.ಎಸ್.ಯು.ಐ. ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ನಂತರ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರತಿಭಟನಾನಿರತರನ್ನು ತಡೆದು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಕೆಲ ಕಾರ್ಯಕರ್ತರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಕರೆದೊಯ್ದಿದ್ದಾರೆ. ನಗರಸಭೆ ಬಳಿ ನಡೆದ ಈ ಪ್ರತಿಭಟನೆಯಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ನಂತರ ಪರಿಸ್ಥಿತಿ ಶಾಂತವಾಗಿದೆ.




