
ದಕ್ಷಿಣ ಕನ್ನಡ: ರಾಜ್ಯದ ಪ್ರಮುಖ ನಾಗಕ್ಷೇತ್ರ ಹಾಗೂ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ದರ್ಶನ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಹೊಸ ನಿಯಮದ ಪ್ರಕಾರ ಬೆಳಗ್ಗೆ 6.30ರಿಂದ ಮಧ್ಯಾಹ್ನ 2.00ರವರೆಗೆ ಹಾಗೂ ಅಪರಾಹ್ನ 3.00ರಿಂದ ರಾತ್ರಿ 8.30ರವರೆಗೆ ನಿರಂತರ ದರ್ಶನ ವ್ಯವಸ್ಥೆ ಇರಲಿದ್ದು, ಈ ಹಿಂದೆ ಮಧ್ಯಾಹ್ನ 1.30ರಿಂದ 3.30ರವರೆಗೆ ದರ್ಶನ ಸ್ಥಗಿತವಾಗುತ್ತಿದ್ದ ಕ್ರಮದಲ್ಲಿ ಬದಲಾವಣೆ ಮಾಡಲಾಗಿದ್ದು, ಈಗ 2.00ರಿಂದ 3.00ರವರೆಗೆ ಮಾತ್ರ ತಾತ್ಕಾಲಿಕ ಬಂದ್ ಇರಲಿದೆ. ಈ ಮೂಲಕ ಭಕ್ತರಿಗೆ ಹೆಚ್ಚುವರಿ ಒಂದು ಗಂಟೆ ದೇವರ ದರ್ಶನಕ್ಕೆ ಅವಕಾಶ ದೊರೆಯಲಿದ್ದು, ದರ್ಶನಕ್ಕಾಗಿ ಗಂಟೆಗಟ್ಟಲೆ ಕಾಯುವ ಅನಿವಾರ್ಯತೆ ಕಡಿಮೆಯಾಗಲಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದೆಲ್ಲೆಡೆಯಿಂದ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಸುಗಮ ದರ್ಶನ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದ್ದು, ಮಹಾಮಂಗಳಾರತಿಯ ಸಮಯದಲ್ಲಿ ಮಾತ್ರ ಅಲ್ಪಕಾಲ ದರ್ಶನ ಸ್ಥಗಿತವಾಗಲಿದೆ. ಈ ಹೊಸ ದರ್ಶನ ವ್ಯವಸ್ಥೆಯನ್ನು ಮೇ 10ರಿಂದಲೇ ಜಾರಿಗೆ ತರಲಾಗಿದ್ದು, ಕ್ಷೇತ್ರದಲ್ಲಿ ಭಕ್ತರ ದಟ್ಟಣೆ ನಿಯಂತ್ರಣ ಹಾಗೂ ಸುಗಮ ವ್ಯವಸ್ಥೆಗೆ ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



