
ಹೈದರಾಬಾದ್ : ನರೇಂದ್ರ ಮೋದಿ ಅವರು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಿತ ಬಳಕೆಗೆ ಕರೆ ನೀಡಿದ್ದು, ಸಾಧ್ಯವಾದಷ್ಟು ವರ್ಕ್ ಫ್ರಮ್ ಹೋಮ್ಗೆ ಆದ್ಯತೆ ನೀಡುವಂತೆ ಜನತೆಗೆ ಸಲಹೆ ನೀಡಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಆಮದು ಮಾಡಿಕೊಳ್ಳುವ ಪೆಟ್ರೋಲ್ ಮತ್ತು ಡೀಸೆಲ್ ಉತ್ಪನ್ನಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಬೇಕು ಎಂದು ಒತ್ತಿ ಹೇಳಿದ್ದು, ಮನೆಯಿಂದಲೇ ಕೆಲಸ ಮಾಡುವುದು, ವಿದ್ಯುತ್ ವಾಹನಗಳ ಬಳಕೆ ಹೆಚ್ಚಿಸುವುದು, ಚಿನ್ನ ಖರೀದಿ ಕಡಿಮೆ ಮಾಡುವುದು ಹಾಗೂ ವಿದೇಶಗಳಲ್ಲಿ ಮದುವೆ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಭಾರತೀಯರಿಗೆ ಮನವಿ ಮಾಡಿದ್ದಾರೆ. ಈ ಕ್ರಮಗಳಿಂದ ವಿದೇಶಿ ವಿನಿಮಯ ಸಂಗ್ರಹ ಉಳಿಸುವುದರ ಜೊತೆಗೆ ಯುದ್ಧದ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಸಹಕಾರಿ ಆಗಲಿದೆ ಎಂದು ಮೋದಿ ತಿಳಿಸಿದ್ದಾರೆ. ಇದೇ ವೇಳೆ ಕಳೆದ ಕೆಲವು ವರ್ಷಗಳಲ್ಲಿ ಸೌರಶಕ್ತಿ ಕ್ಷೇತ್ರದಲ್ಲಿ ಭಾರತ ವಿಶ್ವದ ಅಗ್ರ ರಾಷ್ಟ್ರಗಳ ಪೈಕಿ ಸ್ಥಾನ ಪಡೆದಿದ್ದು, ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವ ಕಾರ್ಯದಲ್ಲೂ ದೇಶ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಪ್ರಧಾನಿ ಪ್ರಶಂಸಿಸಿದ್ದಾರೆ. ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲಿಯೇ ಪ್ರಧಾನಿ ನೀಡಿರುವ ಈ ಸಲಹೆಗಳಿಗೆ ಹೆಚ್ಚಿನ ಮಹತ್ವ ದೊರೆತಿದೆ.




