
ಚಿಕ್ಕಮಗಳೂರು : ಜಿಲ್ಲೆಯ ಚಿಕ್ಕಮಗಳೂರು ತಾಲೂಕಿನ ಖಂಡ್ಯ ಹೋಬಳಿಯ ಬಿದರೆ ಗ್ರಾಮದಲ್ಲಿ ಒಂದೇ ದಿನ ಮೂರು ನಾಗರ ಹಾವುಗಳು ಪ್ರತ್ಯಕ್ಷವಾದ ವಿಚಿತ್ರ ಘಟನೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಗ್ರಾಮದ ನಿವಾಸಿಗಳಾದ ರಾಮೇಗೌಡ, ದೇವರಾಜೇಗೌಡ, ಸುಗ್ಗಿಮಕ್ಕಿ ನಾಗರತ್ನ ಹಾಗೂ ಕೆರೆಮನೆ ನಿವಾಸಿಗಳ ಮನೆಗಳ ಕೋಳಿ ಗೂಡಿಗೆ ಬಿರು ಬಿಸಿಲಿನ ನಡುವೆ ನುಗ್ಗಿದ್ದ ನಾಗರ ಹಾವುಗಳು ಕೋಳಿ ಮೊಟ್ಟೆಗಳನ್ನು ನುಂಗಲು ಯತ್ನಿಸಿದ್ದವು. ಒಂದು ಹಾವು 21 ಮೊಟ್ಟೆಗಳನ್ನು ಇಟ್ಟಿದ್ದರೆ, ಮತ್ತೊಂದು ಹಾವು ಕೋಳಿ ಮೊಟ್ಟೆ ನುಂಗಿ ಹೊರಬರಲಾಗದೆ ಗೂಡಿನಲ್ಲೇ ಸಿಲುಕಿಕೊಂಡಿತ್ತು. ವಿಷಯ ತಿಳಿದ ಸ್ಥಳೀಯರಾದ ಶಶಿ ಬಿದರೆ ಹಾಗೂ ರೋಹಿತ್ ತಕ್ಷಣ ಬಾಳೆಹೊನ್ನೂರಿನ ಉರಗ ತಜ್ಞ ಆಲ್ಬರ್ಟ್ ಅವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಹಾವುಗಳನ್ನು ಸುರಕ್ಷಿತವಾಗಿ ರಕ್ಷಿಸಿ ಡಬ್ಬದಲ್ಲಿ ಹಾಕಿ ಎಲೆಕಲ್ಲು ಸಮೀಪದ ಕಾಡಿಗೆ ಬಿಟ್ಟಿದ್ದಾರೆ. ಒಂದೇ ದಿನ ಮೂರು ನಾಗರ ಹಾವುಗಳು ಕಾಣಿಸಿಕೊಂಡ ಘಟನೆ ಗ್ರಾಮದಲ್ಲಿ ಕುತೂಹಲ ಮೂಡಿಸಿದ್ದು, ಹಾವುಗಳನ್ನು ನೋಡಲು ಬಿದರೆ ಗ್ರಾಮದ ಜನರು ನಾ ಮುಂದು ತಾ ಮುಂದು ಎಂದು ಸ್ಥಳಕ್ಕೆ ಆಗಮಿಸಿ ವೀಕ್ಷಿಸಿದರು.





