
ಚಿಕ್ಕಮಗಳೂರು/ಚಾರ್ಮಾಡಿ ಘಾಟ್ : ಚಾರ್ಮಾಡಿ ಘಾಟ್ನ 10ನೇ ತಿರುವಿನಲ್ಲಿ ಒಂಟಿ ಸಲಗ ರಸ್ತೆ ಮಧ್ಯೆ ನಿಂತ ಪರಿಣಾಮ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ ಘಟನೆ ನಡೆದಿದೆ. ಕಾಡಾನೆ ರಸ್ತೆ ತಡೆದ ಕಾರಣ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ, ರಸ್ತೆಯ ಎರಡೂ ಬದಿಗಳಲ್ಲೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಸವಾರರು ಆತಂಕದಿಂದಲೇ ಕಾದು ಕುಳಿತಿದ್ದು, ಸ್ಥಳದಲ್ಲಿ ಅಸ್ತವ್ಯಸ್ತ ಸಂಚಾರ ಕಂಡುಬಂದಿತು. ಕಾಡಾನೆ ವಾರಕ್ಕೆ ಎರಡು ಬಾರಿ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಿದ್ದರೂ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ. ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.






