
ನವದೆಹಲಿ: ಕೇಂದ್ರ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC) ಭರ್ಜರಿ ಅವಕಾಶ ನೀಡಿದ್ದು, ವಿವಿಧ ತಾಂತ್ರಿಕ ಹಾಗೂ ಆಡಳಿತಾತ್ಮಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲಿಂಗ್ ಮತ್ತು ದೂರಸಂಪರ್ಕ ವಿಭಾಗಗಳಲ್ಲಿ ವ್ಯವಸ್ಥಾಪಕ, ಸಹಾಯಕ ವ್ಯವಸ್ಥಾಪಕ ಹಾಗೂ ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಸಂಬಂಧಿತ ವಿಭಾಗದಲ್ಲಿ BE ಅಥವಾ B.Tech ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಪ್ರಕಾರ 3ರಿಂದ 10 ವರ್ಷಗಳ ವೃತ್ತಿ ಅನುಭವ ಕಡ್ಡಾಯವಾಗಿದ್ದು, ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 35ರಿಂದ 50 ವರ್ಷಗಳೊಳಗಿರಬೇಕು. ಮೀಸಲಾತಿ ವರ್ಗದವರಿಗೆ ಸರ್ಕಾರಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯೂ ಲಭ್ಯವಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 50 ಸಾವಿರ ರೂಪಾಯಿಯಿಂದ 2 ಲಕ್ಷ ರೂಪಾಯಿವರೆಗೆ ಆಕರ್ಷಕ ವೇತನ (IDA ಸ್ಕೇಲ್) ನೀಡಲಾಗುತ್ತಿದ್ದು, ಜೊತೆಗೆ ವೈದ್ಯಕೀಯ ಭತ್ಯೆ, HRA ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಸೌಲಭ್ಯಗಳೂ ದೊರೆಯಲಿವೆ. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಶಾರ್ಟ್ಲಿಸ್ಟ್ ಮಾಡಿ, ಬಳಿಕ ವೈಯಕ್ತಿಕ ಸಂದರ್ಶನ ಹಾಗೂ ವೈದ್ಯಕೀಯ ಫಿಟ್ನೆಸ್ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು NCRTC ಅಧಿಕೃತ ವೆಬ್ಸೈಟ್ http://www.ncrtc.in/ ಗೆ ಭೇಟಿ ನೀಡಿ ‘Careers’ ವಿಭಾಗದ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮೇ 9 ಕೊನೆಯ ದಿನಾಂಕವಾಗಿದೆ.







