
ಚಿಕ್ಕಮಗಳೂರು: ಎನ್.ಆರ್.ಪುರ ತಾಲೂಕು ಬಾಳೆಹೊನ್ನೂರಿನಲ್ಲಿ ವಾಮಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಹಾಗೂ ಅವರ ಜೀಪ್ ಚಾಲಕರ ಮೇಲೆ ವಾಮಾಚಾರ ಪ್ರಯೋಗ ನಡೆದಿರುವುದಾಗಿ ತಿಳಿದುಬಂದಿದೆ. ಮನೆಯ ಗೇಟ್ ಮುಂದೆ ಇಬ್ಬರ ಫೋಟೊಗಳನ್ನು ಇಟ್ಟುಕೊಂಡು ವಾಮಾಚಾರ ನಡೆಸಲಾಗಿದ್ದು, ಮಣ್ಣಿನ ಮಡಿಕೆಯೊಳಗೆ ಅವರ ಫೋಟೊಗಳಿಗೆ ಅರಿಶಿನ-ಕುಂಕುಮ ಹಾಕಿ ಮಡಕೆ ಒಡೆಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಈ ಘಟನೆ ಎಸಿಎಫ್ ಮನೆಯ ಎದುರೇ ನಡೆದಿರುವುದು ಆತಂಕಕ್ಕೆ ಕಾರಣವಾಗಿದ್ದು, ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





