
ನವದೆಹಲಿ: ದೇಶದ ರಾಜಕೀಯವಾಗಿ ಮಹತ್ವದ ಘಟ್ಟದಲ್ಲಿ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಆರಂಭಗೊಂಡಿದೆ. ಎಕ್ಸಿಟ್ ಪೋಲ್ಗಳ ಭವಿಷ್ಯವಾಣಿ ನಿಜವಾಗುತ್ತದೆಯೇ ಅಥವಾ ಹೊಸ ಅಚ್ಚರಿಗಳು ಮೂಡುತ್ತವೆಯೇ ಎಂಬ ಚರ್ಚೆ ನಡುವೆಯೇ ದೇಶದ ರಾಜಕೀಯ ದಿಕ್ಕು ನಿರ್ಧರಿಸುವ ಫಲಿತಾಂಶಕ್ಕಾಗಿ ಕಾದು ನೋಡಲಾಗುತ್ತಿದೆ. ಬಿಗಿ ಪೊಲೀಸ್ ಭದ್ರತೆಯೊಂದಿಗೆ ಮೂರು ಹಂತದ ಸುರಕ್ಷತಾ ವ್ಯವಸ್ಥೆ ನಡುವೆ ಮತ ಎಣಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಸುತ್ತಿನ ಎಣಿಕೆಯೊಂದಿಗೆ ಅಭ್ಯರ್ಥಿಗಳಲ್ಲಿ ಒತ್ತಡ ಹೆಚ್ಚುತ್ತಿದೆ. ಮಧ್ಯಾಹ್ನ ವೇಳೆಗೆ ರಾಜ್ಯವಾರು ಚಿತ್ರಣ ಸ್ಪಷ್ಟವಾಗುವ ನಿರೀಕ್ಷೆಯಿದ್ದು, ಸಂಜೆಯ ವೇಳೆಗೆ ಹೊಸ ಸರ್ಕಾರಗಳ ರೂಪುರೇಷೆ ಹೊರಬರುವ ಸಾಧ್ಯತೆ ಇದೆ. ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಎದುರಾಗಿರುವಾಗ, ಅಸ್ಸಾಂನಲ್ಲಿ ಬಿಜೆಪಿಯ ಹಿಡಿತ ಮುಂದುವರಿಯುವುದೇ ಎಂಬ ಚರ್ಚೆಯೂ ಜೋರಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಡುವಿನ ಹೈವೋಲ್ಟೇಜ್ ಕದನ ದೇಶದ ಗಮನ ಸೆಳೆದಿದ್ದು, ಇದರ ಫಲಿತಾಂಶ ರಾಷ್ಟ್ರೀಯ ರಾಜಕೀಯದ ಮೇಲೂ ಮಹತ್ವದ ಪ್ರಭಾವ ಬೀರುವ ಸಾಧ್ಯತೆ ಇದೆ.




