
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ನಿಡುವಾಳೆ ಸಮೀಪ ಮಳೆಯ ನಡುವೆಯೇ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೂಡಿಗೆರೆ ತಾಲೂಕಿನ ಹಾರ್ಮಕ್ಕಿ ಗ್ರಾಮದ ಕಿರಣ್ ಹಾಗೂ ಪ್ರಫುಲ್ ಎಂದು ಗುರುತಿಸಲಾಗಿದ್ದು, ಅಪಘಾತದ ವೇಳೆ ತೀವ್ರ ರಕ್ತಸ್ರಾವದಿಂದ ಸಂಕಷ್ಟಕರ ಸ್ಥಿತಿಯಲ್ಲಿ ಇದ್ದರು. ಇದೇ ವೇಳೆ ಹೊರನಾಡು ದೇವಸ್ಥಾನದಲ್ಲಿ ನಡೆದ ಸಾಮೂಹಿಕ ಮದುವೆ ಕಾರ್ಯಕ್ರಮದಿಂದ ವಾಪಸ್ಸಾಗುತ್ತಿದ್ದ ಶಾಸಕಿ ನಯನ ಮೋಟಮ್ಮ ಅವರು ಘಟನೆ ಗಮನಿಸಿ ತಕ್ಷಣವೇ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದು, ಗಾಯಾಳುಗಳನ್ನು ತಮ್ಮದೇ ಕಾರಿನಲ್ಲಿ ಕೊಂಡೊಯ್ದು ನಿಡುವಾಳೆ ಮಾರ್ಗವಾಗಿ ಬಣಕಲ್ನ ಕೃಷ್ಣ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶಾಸಕಿ ನಯನ ಮೋಟಮ್ಮ ಅವರ ಈ ಮಾನವೀಯ ಕಾರ್ಯಕ್ಕೆ ಸ್ಥಳೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.




