
ಮೂಡಿಗೆರೆ: ಪ್ರಸಕ್ತ 2026 -27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯೂರಿಯ ರಸಗೊಬ್ಬರವನ್ನು ಪಿಓಎಸ್ ಮೆಶೀನ್ ಮೂಲಕ ವಿತರಣೆ ಮಾಡುವುದರ ಜೊತೆಗೆ ಕೃಷಿ ಇಲಾಖೆಯ ಕೆ-ಕೆಸಾನ್ ತಂತ್ರಾಂಶದಲ್ಲಿ ರೈತರ ಆಧಾರ್ ಸಂಖ್ಯೆಯನ್ನು ನಮೂದಿಸಿ ಎಫ್ ಐ ಡಿ ಸಂಖ್ಯೆಯನ್ನು ಖಾತರಿಪಡಿಸಿಕೊಂಡು ವಿತರಣೆ ಮಾಡುವುದು ಕಡ್ಡಾಯವಾಗಿರುತ್ತದೆ. ರೈತರು ಎಫ್ಐಡಿ ಹೊಂದಿರದೆ ಇದ್ದಲ್ಲಿ ತಮ್ಮ ಆಧಾರ್ ಕಾರ್ಡ್ ಎಲ್ಲಾ ಜಮೀನುಗಳ ಪಹಣಿಯನ್ನು ಹಾಗೂ ಬ್ಯಾಂಕ್ ಖಾತೆಯ ಪುಸ್ತಕದೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆಗಳಿಗೆ ಭೇಟಿ ನೀಡಿ ಎಫ್ಐಡಿ ಮಾಡಿಸಿಕೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕರಾದ ಸುಮ ಎಚ್ ಎನ್ ರವರು ತಿಳಿಸಿದರು.
ಕೃಷಿ ಇಲಾಖೆ ಮೂಡಿಗೆರೆ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಮೂಡಿಗೆರೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಏಪ್ರಿಲ್ 24ರಂದು ರಸಗೊಬ್ಬರ ಮಾರಾಟಗಾರರಿಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮದಲ್ಲಿ ಕೆ ಕಿಸಾನ್ ಮೂಲಕ ಯೂರಿಯ ರಸಗೊಬ್ಬರ ವಿತರಣೆ ಕ್ರಮವನ್ನು ಹಾಗೂ ವಿವಿಧ appಗಳ ಬಳಕೆ ಬಗ್ಗೆ ಜಾರಿ ದಳ ಸಹಾಯಕ ಕೃಷಿ ನಿರ್ದೇಶಕರಾದ ತಿಮ್ಮನಗೌಡ ಪಾಟೀಲ ರವರು ವಿವರಿಸಿದರು.
ಸರ್ಕಾರದಿಂದ ಹೊಸದಾಗಿ ಬಂದಿರುವ ನಿಯಮ ಮತ್ತು ಮಾರ್ಗಸೂಚಿಗಳನ್ನು ಸಮಯ ಅನುಸಾರವಾಗಿ ತರಬೇತಿ,ವಾಟ್ಸಾಪ್ ಸಂದೇಶಗಳ ಮೂಲಕ ಪ್ರತಿಯೊಬ್ಬ ವಿತರಕರಿಗೆ ತಿಳಿಸಲಾಗುತ್ತಿದ್ದು ರೈತರಿಗೆ ತೊಂದರೆ ಆಗದಂತೆ ಮಾರ್ಗಸೂಚಿಗಳನ್ನು ಪಾಲನೆ ಮಾಡಿ ಶಿಫಾರಸ್ಸಿನ ಆಧಾರದ ಮೇಲೆ ರಸಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಬೇಕು ಒಂದು ವೇಳೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮಾನ್ಯ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಎಂ ತಿಳಿಸಿದರು ಹಾಗೂ ರೈತರಿಗೆ ರಾಸಾಯನಿಕ ಗೊಬ್ಬರಗಳ ಬಳಕೆಯ ಬದಲಾಗಿ ಪರ್ಯಾಯವಾಗಿ ಬಳಸುವಂತಹ ಇತರೆ ಸಾವಯವ ಗೊಬ್ಬರಗಳ ಬಗ್ಗೆ ಮತ್ತು ಸರಿಯಾದ ಕ್ರಮದಲ್ಲಿ ಅನುಸರಣೆ ಮಾಡಿ ಭೂಮಿಯ ಫಲವತ್ತತೆ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡಬಹುದೆಂದು ಉಪ ಕೃಷಿ ನಿರ್ದೇಶಕರಾದ ಶ್ರೀಮತಿ ಕುಮುದಾ ತಿಳಿಸಿದರು. ಈ ತರಬೇತಿ ಕಾರ್ಯಕ್ರಮದಲ್ಲಿ ವಿಜ್ಞಾನಿಗಳಾದ ಪ್ರಶಾಂತ್,ಕೃಷಿ ಅಧಿಕಾರಿಯಾದ ಅಮರೇಶ್, ಅನನ್ಯ, ಶೈಲಾ, ಮೂಡಿಗೆರೆ ಹಾಗೂ ಕಳಸ ತಾಲ್ಲೂಕಿನ ಎಲ್ಲಾ ರಸಗೊಬ್ಬರ ವಿತರಕರು ಹಾಜರಿದ್ದರು.




