
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಹೋಬಳಿಯ ದೇವವೃಂದ ಗ್ರಾಮದಲ್ಲಿ 2018-19ನೇ ಸಾಲಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ 9 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಸತ್ತ ನಿವೃತ್ತ ತಹಶೀಲ್ದಾರ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಸರ್ವೇ ನಂ.313ರ ಹೆಚ್.4 ಮತ್ತು ಹೆಚ್.5ರಲ್ಲಿ ಇರುವ ಸರ್ಕಾರಿ ಜಮೀನನ್ನು ಯಾವುದೇ ಅರ್ಜಿ ಸಲ್ಲಿಸದೆ ನೇರವಾಗಿ ಖಾತೆ ಮಾಡಿ ಖಾಸಗಿ ವ್ಯಕ್ತಿಗಳಾದ ನಿಕೇಶ್ ಪೆರೇರಾ ಮತ್ತು ಅನಿಶ್ ಪೆರೇರಾ ಅವರಿಗೆ ಮಂಜೂರು ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬೇರೆ ಕಡತದ ಸಾಗುವಳಿ ಚೀಟಿಯನ್ನು ಅಪ್ಲೋಡ್ ಮಾಡಿ ಅಕ್ರಮವಾಗಿ ದಾಖಲೆ ಸೃಷ್ಟಿಸಿದ ಕುರಿತು ತನಿಖೆಯಲ್ಲಿ ಬಹಿರಂಗವಾಗಿದ್ದು, ನಾಲ್ವರಲ್ಲಿ ಓರ್ವ ಈಗಾಗಲೇ ಮೃತಪಟ್ಟಿದ್ದು ಉಳಿದ ಮೂವರು ನಿವೃತ್ತರಾಗಿದ್ದಾರೆ. ಈ ಬಗ್ಗೆ ತಹಶೀಲ್ದಾರ್ ಅಶ್ವಿನಿ ಅವರು ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.




