
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಗಂಭೀರ ಘಟನೆ ಬೆಳಕಿಗೆ ಬಂದಿದ್ದು, ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಅಂಡರ್ಗ್ರೌಂಡ್ ರೂಮಿನಲ್ಲಿ ಬಂದಿಸಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮಕ್ಕಳು ಆಟವಾಡುತ್ತಿದ್ದರೆಂಬ ಕಾರಣಕ್ಕೆ ಪ್ರಾಚಾರ್ಯರು ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಉಪವಾಸದಲ್ಲಿಟ್ಟು ಮನಸ್ಸೋ ಇಚ್ಛೆ ಥಳಿತ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ಸ್ಥಳೀಯ ವಿದ್ಯಾರ್ಥಿಗಳೆಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಹಲ್ಲೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಅಂಡರ್ಗ್ರೌಂಡ್ ರೂಮಿನಲ್ಲಿ ಸಿಲುಕಿದ್ದ ಮಕ್ಕಳು ಕೂಗಾಡಿದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಎಲ್ಲಾ ಕೊಠಡಿಗಳನ್ನು ಪರಿಶೀಲಿಸಿದಾಗ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಹಲ್ಲೆಗೆ ಒಳಗಾದ ಮಕ್ಕಳ ದೇಹದ ಮೇಲೆ ಗಾಯಗಳ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಣಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಾಚಾರ್ಯರನ್ನು ವಿಚಾರಣೆಗೊಳಪಡಿಸಿದ್ದಾರೆ ಹಾಗೂ ಪ್ರಕರಣ ಸಂಬಂಧ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಇದೇ ವೇಳೆ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆಗೆ ಇಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.






