
ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಅವರನ್ನು ಅಂಡರ್ಗ್ರೌಂಡ್ ಕೊಠಡಿಯಲ್ಲಿ ಬಂದಿಸಿ ಅಮಾನುಷವಾಗಿ ವರ್ತಿಸಲಾಗಿದೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಮಕ್ಕಳು ಆಟವಾಡುತ್ತಿದ್ದರೆಂಬ ಕಾರಣಕ್ಕೆ ಪ್ರಾಚಾರ್ಯರು ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಉಪವಾಸದಲ್ಲಿಟ್ಟು ಥಳಿಸಿದ್ದಾರೆ ಎನ್ನಲಾಗಿದ್ದು, ಸ್ಥಳೀಯ ವಿದ್ಯಾರ್ಥಿಗಳೆಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಅಂಡರ್ಗ್ರೌಂಡ್ ಕೊಠಡಿಯಲ್ಲಿ ಸಿಲುಕಿದ್ದ ಮಕ್ಕಳು ಕೂಗಾಡಿದ ಹಿನ್ನೆಲೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಹಲ್ಲೆಗೆ ಒಳಗಾದ ಮಕ್ಕಳ ದೇಹದ ಮೇಲೆ ಗಾಯಗಳ ಗುರುತುಗಳಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಣಕಲ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಾಚಾರ್ಯರನ್ನು ವಿಚಾರಣೆಗೊಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.





