
ಚಿಕ್ಕಮಗಳೂರು: ಜಿಲ್ಲೆಯ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಪರೂಪದ ಶೋಲಾ ಹುಲ್ಲುಗಾವಲುಗಳು ಬಿಸಿಲಿನ ತಾಪಕ್ಕೆ ಹೊತ್ತಿ ಉರಿಯುತ್ತಿದ್ದು, 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ವಲಯದ ಮಾಣಿಕ್ಯಬೆಟ್ಟ ಮತ್ತು ವಾಲೀಕುಂಜಗಿರಿ ಸಾಲು ಪ್ರದೇಶಗಳಲ್ಲಿ ಬೆಂಕಿ ವ್ಯಾಪಕವಾಗಿ ಹರಡಿದ್ದು, ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಈ ಅಗ್ನಿ ಅವಘಡದಿಂದ ನೆಲದಲ್ಲಿ ಗೂಡು ಕಟ್ಟುವ ಪಕ್ಷಿಗಳು, ಕಾಡು ಪ್ರಾಣಿಗಳು ಹಾಗೂ ಅಪರೂಪದ ಸಸ್ಯಸಂಪತ್ತು ನಾಶವಾಗಿರುವ ಸಾಧ್ಯತೆ ಇದೆ. ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೂರಾರು ಎಕರೆ ಅರಣ್ಯ ಹಾನಿಯಾಗಿದೆಯೆಂದು ಸ್ಥಳೀಯರು ಆರೋಪಿಸಿದ್ದು, ಅರಣ್ಯ ವೀಕ್ಷಕರ ನೇಮಕ ಮಾಡದಿರುವುದು ಹಾಗೂ ಬೆಂಕಿ ನಿಯಂತ್ರಣ ರೇಖೆ, ವೀಕ್ಷಣಾ ಗೋಪುರಗಳ ಕೊರತೆಯೇ ಈ ಅನಾಹುತಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವಾರದಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಅರಣ್ಯ ಸಚಿವರು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ. ಇದೇ ವೇಳೆ ಕಾರ್ಕಳ ಡಿಎಫ್ಓ ಸಿವರಾಮ್ ಬಾಬು ವಿರುದ್ಧವೂ ಸ್ಥಳೀಯರು ಹಾಗೂ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಗಡಿಗಳನ್ನು ಹಂಚಿಕೊಂಡಿರುವ ಕುದುರೆಮುಖ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರವಾಗಿದೆ.




