
ಚಿಕ್ಕಮಗಳೂರಿನ ಕಾಫಿತೋಟಗಳಲ್ಲಿ ಮಲ್ಲಿಗೆ ಹೂವು ಚೆಲ್ಲಿದಂತ ವಾತಾವರಣ ಮೂಡಿದ್ದು, ತೋಟಗಳಲ್ಲಿ ನೆಲವೇ ಕಾಣದಂತೆ ಆಲಿಕಲ್ಲುಗಳು ಹರಡಿಕೊಂಡಿವೆ. ಕಾಫಿತೋಟಗಳು, ಮನೆಗಳು ಹಾಗೂ ಮನೆಯಂಗಳಗಳಲ್ಲಿ ರಾಶಿ ರಾಶಿಯಾಗಿ ಆಲಿಕಲ್ಲು ಸುರಿದ ಪರಿಣಾಮ ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಧಾರಾಕಾರ ಆಲಿಕಲ್ಲು ಮಳೆಯಿಂದ ಮಲೆನಾಡಿಗರು ಹೈರಾಣಾಗಿದ್ದು, ಚಿಕ್ಕಮಗಳೂರು ತಾಲೂಕಿನ ಮಾಗಲು, ಸಂಗಮೇಶ್ವರಪೇಟೆ ಮತ್ತು ಖಾಂಡ್ಯ ಭಾಗಗಳಲ್ಲಿ ಭಾರೀ ಮಳೆ ದಾಖಲಾಗಿದೆ. ಈ ನಡುವೆ ಮಕ್ಕಳು ಆಲಿಕಲ್ಲಿನೊಂದಿಗೆ ಆಟವಾಡುತ್ತಾ, ಪಾತ್ರೆಗಳಲ್ಲಿ ತುಂಬಿಸಿಕೊಂಡು ಖುಷಿಪಟ್ಟರು. ಕಳೆದ ಮೂರು ದಿನಗಳಿಂದ ಮಧ್ಯಾಹ್ನದ ಬಳಿಕ ಮಳೆರಾಯನ ಅಬ್ಬರ ಮುಂದುವರಿದಿದೆ.







