
ಚಿಕ್ಕಮಗಳೂರು: ಟ್ರಾಫಿಕ್ ನಿಯಮಗಳನ್ನು ಹಲವಾರು ಬಾರಿ ಉಲ್ಲಂಘಿಸಿದ ಪ್ರಕರಣದಲ್ಲಿ ತಪ್ಪನ್ನು ಒಪ್ಪಿಕೊಂಡ ವ್ಯಕ್ತಿಗೆ ನ್ಯಾಯಾಲಯವು ಕಮ್ಯುನಿಟಿ ಸೇವೆಯ ರೂಪದಲ್ಲಿ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ. ಕಡೂರು ತಾಲೂಕಿನ ಬಿಸಿಲೇಹಳ್ಳಿ ಗ್ರಾಮದ ರಂಜಿತ್ ಎಂಬಾತ ಸಾಕಷ್ಟು ಬಾರಿ ಟ್ರಾಫಿಕ್ ರೂಲ್ಸ್ ಉಲ್ಲಂಘಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರಿಂದ, ಮಾರ್ಚ್ 17ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಕಡೂರು ಪಟ್ಟಣದ ಮರವಂಜಿ ಸರ್ಕಲ್ನಲ್ಲಿ ಕೈಯಲ್ಲಿ ಬೋರ್ಡ್ ಹಿಡಿದು ರಸ್ತೆ ಮಧ್ಯೆ ನಿಲ್ಲುವಂತೆ ನ್ಯಾಯಾಲಯ ಆದೇಶಿಸಿದೆ. ಜೊತೆಗೆ, ಆತ ನಿಗದಿತ ಸಮಯದವರೆಗೆ ಅಲ್ಲೇ ನಿಂತಿರುವುದನ್ನು ಗಮನಿಸಲು ಒಬ್ಬ ಪೊಲೀಸರನ್ನು ನೇಮಿಸಿ, ಇಡೀ ದಿನ ನಿಂತ ನಂತರ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿದೆ.





