
ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕು, ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಹಂಪಸಾಗರ ಗ್ರಾಮದಲ್ಲಿ ಬಂಜಾರ ಸಮುದಾಯದವರ ಸಹಯೋಗದಲ್ಲಿ ಫೆಬ್ರವರಿ 20ರಂದು ಸಂತ ಶ್ರೀ ಸೇವಾಲಾಲ್ ಮಹಾರಾಜರ ವೃತ್ತ ಉದ್ಘಾಟನೆ ಹಾಗೂ 287ನೇ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಹರಾವತ್ ತಾಂಡ, ರಾಮವತ್ ತಾಂಡ, ನಾಗಲಾಪುರ ತಾಂಡ, ದುಂಗಾವತಿ ತಾಂಡ ಹಾಗೂ ದಿತ್ಯ ತಾಂಡಗಳ ಸಮುದಾಯದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದುಂಗಾವತಿ ತಾಂಡದ ಶ್ರೀ ಬಾಲಬ್ರಹ್ಮಚಾರಿ ಚಂದ್ರು ಮಹಾರಾಜ ಸ್ವಾಮೀಜಿ ಹಾಗೂ ಹಂಪಸಾಗರ (2)ರ ಅಭಿನವ ಶಿವಲಿಂಗೇಶ್ವರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳು ಸಾನಿಧ್ಯ ವಹಿಸಿ, ಶ್ರೀ ಸಂತ ಸೇವಾಲಾಲ್ ಮಹಾರಾಜರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ವೃತ್ತದಿಂದ ಆರಂಭವಾದ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭಕ್ತರ ಸಂಭ್ರಮಕ್ಕೆ ಸಾಕ್ಷಿಯಾಯಿತು. ವಿವಿಧ ವಾದ್ಯವೃಂದಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರು ಮತ್ತು ಪುರುಷರು ಸಾಂಪ್ರದಾಯಿಕ ಉಡುಪು ಧರಿಸಿ, ಬಂಜಾರ ಸಮುದಾಯದ ಸಂಸ್ಕೃತಿ ಹಾಗೂ ಹಾಡುಗಳೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದರು. ವಿಜಯನಗರ ಜಿಲ್ಲೆಯ ವಿವಿಧ ತಾಂಡಗಳಿಂದ ಆಗಮಿಸಿದ ಸಾವಿರಾರು ಭಕ್ತರು, ಸಮುದಾಯದ ಮುಖಂಡರು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯರು, ಯುವಕರು, ಮಹಿಳೆಯರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದರು.
ವಿ.ಜಿ. ವೃಷಭೇಂದ್ರ ಕೂಡ್ಲಿಗಿ : 9008937428/ 8151937428







