ಉಡುಪಿಯ ಕೃಷ್ಣನಗರಿಯಲ್ಲಿ ಭಕ್ತಿಭಾವದ ವಾತಾವರಣದ ನಡುವೆ ಶೀರೂರು ಮಠದ 31ನೇ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಭಾನುವಾರ ಮುಂಜಾನೆ ಶಾಸ್ತ್ರೋಕ್ತವಾಗಿ ಸರ್ವಜ್ಞ ಪೀಠ ಅಲಂಕರಿಸಿ ಮುಂದಿನ ಎರಡು ವರ್ಷಗಳ ಶ್ರೀಕೃಷ್ಣ ಪೂಜಾ ಅಧಿಕಾರ ವಹಿಸಿಕೊಂಡರು. ಜನವರಿ 18ರಂದು ಕಾಪುವಿನ ದಂಡತೀರ್ಥದಲ್ಲಿ ಪುಣ್ಯಸ್ನಾನಗೈದ ಬಳಿಕ ನಡೆದ ಭವ್ಯ ಮೆರವಣಿಗೆಯಲ್ಲಿ ಶ್ರೀಗಳು ಭಾಗವಹಿಸಿ ಕನಕನ ಕಿಂಡಿಯ ಮೂಲಕ ಕೃಷ್ಣದರ್ಶನ ಪಡೆದರು. ನಿಕಟಪೂರ್ವ ಪರ್ಯಾಯ ಪೀಠಾಧೀಶರಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಕ್ಷಯ ಪಾತ್ರೆ ನೀಡಿ ಪೀಠಾರೋಹಣ ಮಾಡಿಸಿದರು. ಬಳಿಕ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಮೈಸೂರು ಸಂಸದ ಯದುವೀರ್ ಒಡೆಯರ್ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
