ಕೊಟ್ಟಿಗೆಹಾರ: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ತಂದೆಯೇ ತನ್ನ ಮಗನನ್ನು ಹತ್ಯೆಗೈದ ಭೀಕರ ಘಟನೆ ನಡೆದಿದೆ. ಮೃತ ಯುವಕನನ್ನು ಪ್ರದೀಪ್ ಆಚಾರ್ (29) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪಿ ತಂದೆ ರಮೇಶ್ ಆಚಾರ್ ಎನ್ನಲಾಗಿದೆ. ಕ್ಷುಲಕ ಕಾರಣಗಳಿಗೆ ಮದ್ಯಪಾನ ಮಾಡಿ ಮನೆಯಲ್ಲೇ ಆಗಾಗ್ಗೆ ಗಲಾಟೆ ಮಾಡುತ್ತಿದ್ದ ತಂದೆ–ಮಗನ ನಡುವೆ ಕಲಹ ತೀವ್ರವಾಗಿದ್ದು, ಈ ಕಾರಣದಿಂದ ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿ ರಮೇಶ್ ಆಚಾರ್ ತನ್ನ ಮಗನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಪ್ರದೀಪ್ ರಕ್ತಸ್ರಾವದಿಂದ ಮೃತಪಟ್ಟಿದ್ದಾನೆ. ಬೆಳಗ್ಗೆ ಮನೆಯ ಹಾಲ್ನಿಂದ ಮೃತದೇಹವನ್ನು ಹೊರಾಂಗಣಕ್ಕೆ ಎಳೆದಿದ್ದ ಆರೋಪಿಯನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
