ಮೂಡಿಗೆರೆ: ಮೂಡಿಗೆರೆ ತಾಲ್ಲೂಕಿನ ಫಲ್ಗುಣಿ ಗ್ರಾಮದಲ್ಲಿ ಮೂರು ವರ್ಷಗಳಿಂದ ಗ್ರಾಮಸ್ಥರು ಅಶುದ್ಧ ನೀರು ಕುಡಿಯುವ ಪರಿಸ್ಥಿಯಲ್ಲಿ ಬದುಕುತ್ತಿದ್ದಾರೆ. ಬಾವಿಯಿಂದ ಟ್ಯಾಂಕ್ಗಳಿಗೆ ಸಂಪರ್ಕ ಕಲ್ಪಿಸದೇ, ಹೇಮಾವತಿ ನದಿಯ ನೀರನ್ನೇ ನೇರವಾಗಿ ಸರಬರಾಜು ಮಾಡಲಾಗುತ್ತಿದೆ ಎನ್ನುವುದು ಸ್ಥಳೀಯರ ಆರೋಪ. ಮಳೆಗಾಲದಲ್ಲಿ ನದಿಗೆ ಸೇರುವ ಮಣ್ಣು, ಕೊಳಕು, ಕಸ ಮುಂತಾದ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಸೇರಿರುವ ಸಾಧ್ಯತೆ ಹೆಚ್ಚಿದೆ. ಈ ನಡುವೆ, ನದಿತೀರದಲ್ಲಿ ಮೃತಪಟ್ಟಿದ್ದ ನಾಯಿ ವಾರಗಳಾದರೂ ತೆರವುಗೊಳಿಸದಿರುವುದು ಗ್ರಾಮಸ್ಥರಲ್ಲಿ ಭೀತಿ ಹಾಗೂ ಅಸಮಾಧಾನ ಹೆಚ್ಚಿಸಿದೆ. “ಮಾನವ ಜೀವಕ್ಕೇ ಯಾರಿಗೂ ಬೆಲೆ ಇಲ್ಲವೇ?” ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ತುರ್ತು ಪರಿಹಾರಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ಸಾರ್ವಜನಿಕ ಆರೋಗ್ಯ ಹಾಗೂ ಪಾನೀಯ ಜಲ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
