ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನ 9ನೇ ಮೈಲಿ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಆತಂಕಕ್ಕೆ ಕಾರಣವಾಗಿದೆ. ಬುರುಗಮನೆ ಗ್ರಾಮದ ಸಮೀಪದ ರಾಜ್ಯ ಹೆದ್ದಾರಿಯಲ್ಲಿ 2 ಕಾಡಾನೆಗಳು ರಸ್ತೆ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮೊದಲ ಆನೆ ಸುರಕ್ಷಿತವಾಗಿ ದಾಟಿದರೂ, ಎರಡನೆಯ ಆನೆ ರಸ್ತೆಯ ಮಧ್ಯಭಾಗ ತಲುವಷ್ಟರಲ್ಲಿ ವೇಗವಾಗಿ ಬಂದ ಕಾರು ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಆನೆ ಕಾರಿನ ಮೇಲೆ ಬಿದ್ದಿದೆ. ಆದರೂ ಆನೆ ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ, ಯಾರಿಗೂ ಹಾನಿಮಾಡದೆ ಎದ್ದು ಅರಣ್ಯದತ್ತ ಸಾಗಿದೆ. ಎನ್.ಆರ್.ಪುರ ಮುಖ್ಯ ರಸ್ತೆಯ ಈ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು ಘಟನೆ ಸಂಬಂಧ ಎನ್.ಆರ್.ಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಡು ಜೀವಿಗಳ ಸಂಚಾರ ಹೆಚ್ಚಿರುವ ಈ ಅರಣ್ಯ ಮಾರ್ಗದಲ್ಲಿ ರಾತ್ರಿ ವೇಳೆ ವಾಹನ ಸಾಗಿಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯವಿದೆ ಎಂದು ಅರಣ್ಯ ಇಲಾಖೆ ಎಚ್ಚರಿಸಿದೆ.
