ಉಡುಪಿ: ಕರಾವಳಿಯ ಸಾಂಸ್ಕೃತಿಕ ಹೃದಯವಾದ ಉಡುಪಿ ಈ ಬಾರಿ ಸಂಗೀತ ಪ್ರಿಯರಿಗೆ ನಿಜವಾದ ಉತ್ಸವವನ್ನು ನೀಡಲಿದೆ. ನವೆಂಬರ್ 8ರಿಂದ ಡಿಸೆಂಬರ್ 7, 2025ರ ವರೆಗೆ ನಡೆಯಲಿರುವ ಬೃಹತ್ ಗೀತೋತ್ಸವ ರಾಜ್ಯದ ಅತ್ಯಂತ ದೊಡ್ಡ ಸಂಗೀತೋತ್ಸವಗಳಲ್ಲಿ ಒಂದಾಗಲಿದೆ. 28ರಂದು ಬೆಳಿಗ್ಗೆ 9.30ಕ್ಕೆ ಲಕ್ಷ ಕಂಠ ಗೀತ ಪಾರಾಯಣ ಆರಂಭವಾಗಲಿದ್ದು ಮಧ್ಯಾಹ್ನ12.30ಕ್ಕೆ ಕೊನೆಗೊಳ್ಳಲಿದೆ. ಅಂದೇ ಪ್ರಧಾನಿ ನರೇಂದ್ರ ಮೋದಿಯವರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಸುವರ್ಣ ಮುಖಮಂಟಪ ಮತ್ತು ಕನಕನ ಕಿಂಡಿಗೆ ಕನಕದ ಕವಚ ಉದ್ಘಾಟಿಸಿ ಬಳಿಕ ಗೀತೋತ್ಸವದ ಪ್ರಮುಖ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವು ಉಡುಪಿ ಶ್ರೀ ಕೃಷ್ಣ ಮಠದ ಆವರಣದಲ್ಲಿ ನಡೆಯಲಿದ್ದು, ಧಾರ್ಮಿಕತೆ ಮತ್ತು ಸಂಗೀತದ ಸೌಂದರ್ಯವನ್ನು ಒಂದೇ ವೇದಿಕೆಯಲ್ಲಿ ಅನುಭವಿಸಲು ಅವಕಾಶ ಕಲ್ಪಿಸುತ್ತದೆ ಎಂದು ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
