
ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿಯಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಾಗಿ ಇಂದಿರಾ ಆಹಾರ ಕಿಟ್ ನೀಡುವ ಯೋಚನೆಯನ್ನು ಸರ್ಕಾರ ಮಾಡಿದೆ. ಆಹಾರ ಖಾತೆ ಸಚಿವರಾದ ಕೆ.ಎಚ್. ಮುನಿಯಪ್ಪರವರು ಜುಲೈ 2 ರಂದು ನಂದಿ ಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ಥಾವನೆಯನ್ನು ಮಂಡಿಸಲಿದ್ದಾರೆ ಎಂದು ಆಹಾರ ಇಲಾಖೆ ಮೂಲಗಳು ಖಚಿತ ಪಡಿಸಿವೆ. ಈ ಬಗ್ಗೆ ಇಲಾಖೆಯ ವೆಬ್ಸೈಟ್ನಲ್ಲಿ ಈಗಾಗಲೇ ಪ್ರಕಟಣೆ ಹೊರಡಿಸಲಾಗಿದ್ದು. ರಾಜ್ಯದ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಅನ್ನಭಾಗ್ಯದ ಅಕ್ಕಿಯ ಜೊತೆ ಪೌಷ್ಟಿಕ ಆಹಾರದ ಇಂದಿರಾ ಆಹಾರ ಕಿಟ್ ಉಚಿತವಾಗಿ ರೇಷನ್ ಅಂಗಡಿಯಲ್ಲಿ ವಿತರಣೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಇಂದಿರಾ ಆಹಾರ ಕಿಟ್ನಲ್ಲಿ ಸಕ್ಕರೆ, ಉಪ್ಪು, ಚಹಾಪುಡಿ, ಕಾಫಿ ಪುಡಿ, ಗೋಧಿ ಹಾಗೂ ಬೇಳೆ ಇರಲಿದೆ.