ಬೆಂಗಳೂರು : ನಂದಿನಿ ಮೊಸರಿನ ಬೆಲೆ ಇಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿ 20 ದಿನಗಳಿಗೂ ಹೆಚ್ಚು ಕಾಲ ಕಳೆದರೂ ಕೆಎಂಎಫ್ ಇನ್ನೂ ದರ ಕಡಿತ ಮಾಡಿಲ್ಲ. ಇತ್ತೀಚೆಗೆ ಹಾಲಿನ ಕೊಬ್ಬಿನ ಪ್ರಮಾಣಕ್ಕೆ ಅನುಗುಣವಾಗಿ ಪ್ರತಿ ಲೀಟರ್ ಹಾಲಿನ ಬೆಲೆಯನ್ನು 8ರಿಂದ 14 ರೂಪಾಯಿವರೆಗೆ ಹೆಚ್ಚಿಸಲಾಗಿತ್ತು. ಇದರ ಜೊತೆಗೆ ಮೊಸರಿನ ಬೆಲೆಯನ್ನು ಪ್ರತಿ ಲೀಟರ್ಗೆ 14 ರೂಪಾಯಿ ಹಾಗೂ ಅರ್ಧ ಲೀಟರ್ಗೆ 6 ರೂಪಾಯಿ ಏರಿಕೆ ಮಾಡಲಾಗಿತ್ತು. ಬೆಲೆ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೊಸರಿನ ಬೆಲೆಯನ್ನು ಕನಿಷ್ಠ 2 ರೂಪಾಯಿ ಇಳಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದರು. ಆದರೆ 20 ದಿನ ಕಳೆದರೂ ಬೆಲೆ ಇಳಿಕೆ ಜಾರಿಯಾಗಿಲ್ಲ. ಇದರಿಂದ ಗ್ರಾಹಕರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಸೂಚನೆಗೂ ಅಧಿಕಾರಿಗಳು ಮಹತ್ವ ನೀಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಹಾಲು ಮತ್ತು ಮೊಸರು ದಿನನಿತ್ಯದ ಅಗತ್ಯ ವಸ್ತುಗಳಾಗಿರುವುದರಿಂದ ಬೆಲೆ ಏರಿಕೆಯಿಂದ ಕುಟುಂಬಗಳ ಖರ್ಚಿನ ಹೊರೆ ಹೆಚ್ಚಾಗಿದೆ ಎಂದು ಗೃಹಿಣಿಯರು ಅಭಿಪ್ರಾಯಪಟ್ಟಿದ್ದಾರೆ. ಹಿಂದಿನಂತೆ ಏಕರೂಪದ ಬೆಲೆ ಏರಿಕೆ ಮಾಡದೆ ವಿಭಿನ್ನ ಪ್ರಮಾಣದಲ್ಲಿ ದರ ಹೆಚ್ಚಿಸಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಬೆಲೆ ಕಡಿತದ ಭರವಸೆ ನೀಡಿದ ಬಳಿಕವೂ ಅದನ್ನು ಜಾರಿಗೊಳಿಸದಿರುವುದರಿಂದ ಜನರು ಬೆಲೆ ಏರಿಕೆಗೆ ಹೊಂದಿಕೊಂಡು ಸುಮ್ಮನಾಗುತ್ತಾರೆ ಎಂಬ ಭಾವನೆ ಸರ್ಕಾರಕ್ಕಿದೆಯೇ ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆಎಂಎಫ್ ಆಡಳಿತಾಧಿಕಾರಿ ಎಂ.ವಿ. ವೆಂಕಟೇಶ್, ಜಿಲ್ಲಾ ಹಾಲು ಒಕ್ಕೂಟಗಳೊಂದಿಗೆ ಮೊಸರಿನ ಬೆಲೆ ಇಳಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ ಈವರೆಗೆ ಒಮ್ಮತಕ್ಕೆ ಬರಲಾಗಿಲ್ಲ. ಚರ್ಚೆಗಳು ಪೂರ್ಣಗೊಂಡ ಬಳಿಕವೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸೂಚನೆ ನೀಡಿ 20 ದಿನಗಳಿಗೂ ಹೆಚ್ಚು ಕಳೆದರೂ ನಂದಿನಿ ಮೊಸರಿನ ಬೆಲೆ ಇಳಿಕೆ ಯಾವಾಗ ಜಾರಿಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಗ್ರಾಹಕರು ಕಾಯುತ್ತಿದ್ದಾರೆ.
