
ಕಾರ್ಕಳ: ಕಾಂಗ್ರೆಸ್ ಪಕ್ಷ ದೇಶಾದ್ಯಂತ ಮತಗಳ್ಳತನದ ವಿರುದ್ಧ ಸುದೀರ್ಘ ಹಾಗೂ ಪ್ರಬಲ ಹೋರಾಟ ನಡೆಸುತ್ತಿದ್ದು, ಇದಕ್ಕೆ ಬೆಂಬಲವಾಗಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅವರು ದೀಪಾವಳಿ ಹಬ್ಬದ ಗೂಡುದೀಪದ ಮೂಲಕ ಮತದಾರರಲ್ಲಿ ಮತಗಳ್ಳತನದ ಬಗ್ಗೆ ಜಾಗೃತಿ ಮೂಡಿಸುವ ವಿನೂತನ ಪ್ರಯೋಗ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ. ವೋಟ್ ಬಚಾವೋ ದೇಶ್ ಬಚಾವೋ, ವೋಟ್ ಚೋರ್ ಗದ್ದಿ ಛೋಡ್, ಮತ ಮಾರಾಟಕ್ಕಿಲ್ಲ – ಮತ ಕಳ್ಳತನಕ್ಕಿಲ್ಲ, ನಮ್ಮ ಮತ – ನಮ್ಮ ಹಕ್ಕು, ಪ್ರಜಾಪ್ರಭುತ್ವ ರಕ್ಷಣೆ – ನಮ್ಮೆಲ್ಲರ ಹೊಣೆ ಎಂಬಿತ್ಯಾದಿ ಜಾಗೃತಿ ಸಂದೇಶಗಳನ್ನು ಗೂಡುದೀಪದಲ್ಲಿ ಬರೆಯುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆಯೂ ಕೋವಿಡ್-19 ಸಂದರ್ಭದಲ್ಲಿ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಗೂಡುದೀಪದ ಮೂಲಕ ಹಲವು ಜಾಗೃತಿ ಸಂದೇಶಗಳನ್ನು ನೀಡಿದ್ದ ಶುಭದರಾವ್ ಅವರು, ಇದೀಗ ಮತದಾನದ ಮಹತ್ವ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಮೂಲಕ ಗಮನ ಸೆಳೆದಿದ್ದಾರೆ.




