
ಕಾರ್ಕಳ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆಪ್ಟೆಂಬರ್ 18ರಂದು ಹೆಬ್ರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪತ್ರಿಕಾಗೋಷ್ಠಿ ನಡೆಸಿದರು. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಮಲೆನಾಡು ಹಾಗೂ ಕರಾವಳಿ ಭಾಗದ ಜನರಲ್ಲಿ ಸಾಕಷ್ಟು ಗೊಂದಲ ಮತ್ತು ಆತಂಕಗಳಿದ್ದು, ಹೆಬ್ರಿ ಭೇಟಿಯ ವೇಳೆ ಮುಖ್ಯಮಂತ್ರಿ ಅವರು ಈ ಭಾಗದ ಜನರ ಸಮಸ್ಯೆಗಳನ್ನು ಆಲಿಸುವ ನಿರೀಕ್ಷೆಯಿದೆ ಎಂದು ಮಂಜುನಾಥ ಪೂಜಾರಿ ತಿಳಿಸಿದರು. ಬಳಿಕ ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವಿನ ಕುರಿತು ಸ್ಪಷ್ಟ ಸಂದೇಶ ನೀಡುವ ಸಾಧ್ಯತೆಯಿದೆ ಎಂದರು. ಮುಖ್ಯಮಂತ್ರಿಗಳ ಸಭೆಯಲ್ಲಿ ಕಾರ್ಕಳ ಮಾತ್ರವಲ್ಲದೆ ಕುಂದಾಪುರ, ತೀರ್ಥಹಳ್ಳಿ ಹಾಗೂ ಮಂಗಳೂರು ಭಾಗದ ಜನರು ಕೂಡ ಭಾಗವಹಿಸುವ ನಿರೀಕ್ಷೆಯಿದ್ದು, ಹೆಬ್ರಿ ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮ್ಮ ಆತಂಕ ಹಾಗೂ ಗೊಂದಲಗಳನ್ನು ಒಗ್ಗಟ್ಟಾಗಿ ಮುಖ್ಯಮಂತ್ರಿಗಳ ಮುಂದಿಡಬೇಕು ಎಂದು ಮನವಿ ಮಾಡಿದರು. ಸಿಎಂ ಹೆಬ್ರಿ ಭೇಟಿ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಪೊಲೀಸರು ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಬ್ರಿಯ ಮುಂದಾಳು ಭಾಸ್ಕರ ಜೋಯಿಸ್, ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ. ಅಡ್ಯಂತಾಯ ಸೇರಿದಂತೆ ಶಂಕರ ಶೇರಿಗಾರ್, ಹರೀಶ ಶೆಟ್ಟಿ ನಾಡಾಲು, ಭೋಜ ಕುಲಾಲ್ ಬೇಳಂಜೆ, ಹರೀಶ ಪೂಜಾರಿ ಬೇಳಂಜೆ, ಗಫೂರ್ ಅಜೆಕಾರು ಮತ್ತಿತರರು ಉಪಸ್ಥಿತರಿದ್ದರು.
ವರದಿ: ಅರುಣ್ ಭಟ್ ಕಾರ್ಕಳ




