
ಎನ್.ಆರ್. ಪುರ: ಕಾಡಿನಲ್ಲಿ ಮೇಯುತ್ತಿದ್ದ ಜಾನುವಾರುಗಳನ್ನು ಹಿಡಿದು ತಂದು ಎಸ್ಟೇಟ್ನ ಕೂಲಿಲೈನ್ ಬಳಿ ಅಕ್ರಮವಾಗಿ ವಧೆ ಮಾಡಿ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗಂಟೆನಾಯ್ಕ ಎಸ್ಟೇಟ್ನಲ್ಲಿ ಅಕ್ರಮವಾಗಿ ಜಾನುವಾರು ವಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಾಳೆಹೊನ್ನೂರು ಠಾಣಾ ಪೊಲೀಸರು ಪಂಚರೊಂದಿಗೆ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಐವರ ಪೈಕಿ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರು ಕತ್ತಲಿನಲ್ಲೇ ಪರಾರಿಯಾಗಿದ್ದಾರೆ. ಬಂಧಿತರನ್ನು ಅಸ್ಸಾಂ ಮೂಲದ ಕಾರ್ಮಿಕರಾದ ಹಶೀಮ್ ಅಲಿ, ಶಾಹದತ್ ಅಲಿ ಹಾಗೂ ಆಸಾದುಲ್ ಹಕ್ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಮುಬರಾಕ್ ಹಾಗೂ ಸಫಿಕುಲ್ ಇಸ್ಲಾಂಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಸ್ಥಳ ಪರಿಶೀಲನೆ ವೇಳೆ ಸುಮಾರು 20 ಕೆ.ಜಿ. ಜಾನುವಾರು ಮಾಂಸ, ಎರಡು ಕತ್ತಿಗಳು ಹಾಗೂ ಮರದ ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅಕ್ರಮವಾಗಿ ಜಾನುವಾರು ವಧೆ ಮಾಡಿ ಮಾಂಸ ಮಾರಾಟಕ್ಕೆ ಯತ್ನಿಸಿದ ಆರೋಪದಡಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




