
ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಆಹಾರ ಪದಾರ್ಥಗಳಲ್ಲಿ ಹುಳ-ಉಪ್ಪಟೆಗಳು ಪತ್ತೆಯಾಗುತ್ತಿರುವ ಘಟನೆಗಳ ಬೆನ್ನಲ್ಲೇ, ಇದೀಗ ನಗರದ ಪ್ರತಿಷ್ಠಿತ ಖಾಸಗಿ ಹೋಟೆಲ್ನ ಫ್ರೂಟ್ ಸಲಾಡ್ನಲ್ಲಿ ಹಾವಿನಂತೆ ಕಾಣುವ ವಿಚಿತ್ರ ಜೀವಿಯೊಂದು ಪತ್ತೆಯಾಗಿದೆ. ಹೋಟೆಲ್ನಲ್ಲಿ ಗ್ರಾಹಕರಿಗೆ ನೀಡಲಾಗಿದ್ದ ಫ್ರೂಟ್ ಸಲಾಡ್ನಲ್ಲಿ ಈ ಜೀವಿ ಪತ್ತೆಯಾಗಿದ್ದು, ಇದು ಹ್ಯಾಮರ್ ಹೆಡ್ ಜಂತು ಎಂದು ಹೇಳಲಾಗುತ್ತಿದೆ. ನೋಡಲು ಹಾವಿನಂತೆ ಕಾಣುವ ಈ ಜೀವಿ ಸಲಾಡ್ನ ಸಣ್ಣ ಬಟ್ಟಲಿನಲ್ಲಿ ಹೇಗೆ ಬಂತು ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ. ಇತ್ತೀಚೆಗೆ ಕಾಫಿನಾಡಿನ ವಿವಿಧ ಹೋಟೆಲ್ಗಳು ಮತ್ತು ಬೇಕರಿಗಳ ಆಹಾರ ಪದಾರ್ಥಗಳಲ್ಲೂ ಅಸ್ವಚ್ಛತೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದ ಆರೋಪಗಳು ಕೇಳಿಬಂದಿದ್ದವು. ಹೋಟೆಲ್ನಲ್ಲಿ ವಡೆಯಲ್ಲಿ ಹಲ್ಲಿ ಪತ್ತೆಯಾದ ಘಟನೆ, ಬೇಕರಿಯಲ್ಲಿ ಅವಧಿ ಮೀರಿದ ಸಾಸ್ ಬಳಕೆಯ ಆರೋಪ ಸೇರಿದಂತೆ ಹಲವು ಪ್ರಕರಣಗಳು ಸುದ್ದಿಯಾಗಿದ್ದವು. ಇದರ ಜೊತೆಗೆ ನಾಟಿ ತುಪ್ಪದ ಹೆಸರಿನಲ್ಲಿ ಡಾಲ್ಡಾ, ವನಸ್ಪತಿಗೆ ರಾಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಇದೀಗ ಫ್ರೂಟ್ ಸಲಾಡ್ನಲ್ಲಿ ವಿಚಿತ್ರ ಜೀವಿ ಪತ್ತೆಯಾಗಿರುವುದು ಹೋಟೆಲ್ಗಳು ಮತ್ತು ರೆಸಾರ್ಟ್ಗಳಲ್ಲಿ ಆಹಾರ ತಯಾರಿಕೆ ಹಾಗೂ ಸ್ವಚ್ಛತಾ ಕ್ರಮಗಳ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಮೂಡಿಸಿದೆ.
ವರದಿ: ಸಂತೋಷ್ ಅತ್ತಿಗೆರೆ




