
ಬೆಂಗಳೂರು: ರಾಜ್ಯದಲ್ಲಿ ಕೃತಕ ಪನ್ನೀರ್ ಬಳಕೆಗೆ ನಿಷೇಧ ಹೇರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟನೆ ನೀಡಿದ್ದಾರೆ. ಕೃತಕ ಪನ್ನೀರ್ ಮಾತ್ರವಲ್ಲದೆ, ಕೃತಕವಾಗಿ ತಯಾರಿಸಲಾಗುವ ಎಲ್ಲ ಆಹಾರ ಉತ್ಪನ್ನಗಳ ಬಳಕೆಯನ್ನೂ ನಿಯಂತ್ರಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಕೃತಕ ಪನ್ನೀರ್ ನಿಷೇಧವನ್ನು ಒಂದು ವರ್ಷದ ಅವಧಿಗೆ ಜಾರಿಗೊಳಿಸಲಾಗಿದೆ. ಆಯುಕ್ತರಿಗೆ ಒಂದು ವರ್ಷದವರೆಗೆ ಮಾತ್ರ ನಿಷೇಧ ಆದೇಶ ಹೊರಡಿಸುವ ಅಧಿಕಾರವಿದ್ದು, ಶಾಶ್ವತ ನಿಯಮ ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುವುದರಿಂದ ಈ ಕುರಿತು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ. ಪದೇಪದೇ ತಾತ್ಕಾಲಿಕ ಆದೇಶಗಳನ್ನು ಹೊರಡಿಸುವ ಬದಲು, ಕೃತಕ ಆಹಾರ ಉತ್ಪನ್ನಗಳ ವಿರುದ್ಧ ಶಾಶ್ವತ ಹಾಗೂ ಪರಿಣಾಮಕಾರಿ ನಿಯಮ ಜಾರಿಯಾಗಬೇಕು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಹಣ್ಣುಗಳನ್ನು ರಾಸಾಯನಿಕ ಬಳಸಿ ಮಾಗಿಸುವ ಪ್ರಕರಣಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ಬಾಳೆಹಣ್ಣು, ಸಪೋಟ, ಮಾವು ಸೇರಿದಂತೆ ವಿವಿಧ ಹಣ್ಣುಗಳನ್ನು ಕೃತಕವಾಗಿ ಮಾಗಿಸುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.




