
ಕಾರ್ಕಳ: ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 4ರಂದು ಸಂಜೆ 7 ಗಂಟೆಗೆ ಹೊಟೇಲ್ ಕಟೀಲ್ ಇಂಟರ್ನ್ಯಾಶನಲ್ನಲ್ಲಿ ನಡೆಯಿತು. ಜಿಲ್ಲೆ 317ಸಿ ಪ್ರಥಮ ಉಪಜಿಲ್ಲಾ ಗವರ್ನರ್ ಪಿಎಂಜೆಎಫ್ ಹರಿಪ್ರಸಾದ್ ರೈ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ನಯನ ನಾಯಕ್ ಅಧ್ಯಕ್ಷರಾಗಿ, ನಿಹಾಲ್ ಶೆಟ್ಟಿ ಜಕ್ಕನ್ಮಕ್ಕಿ ಕಾರ್ಯದರ್ಶಿಯಾಗಿ ಹಾಗೂ ಟಿ.ಕೆ. ರಘುವೀರ್ ಕೋಶಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ನೂತನ ಸದಸ್ಯರಾಗಿ ಸೇರ್ಪಡೆಯಾದ ನಿವೃತ್ತ ಶಿಕ್ಷಕಿ ಹಾಗೂ ಪ್ರಸ್ತುತ ಯೋಗ ಶಿಕ್ಷಕಿಯಾಗಿರುವ ಸುಲೋಚನಾ ನಾಯಕ್ ಹಾಗೂ ಉದ್ಯಮಿ ರಘುಪತಿ ನಾಯಕ್ ಅವರಿಗೆ ಹರಿಪ್ರಸಾದ್ ರೈ ಪ್ರಮಾಣವಚನ ಬೋಧಿಸಿದರು. ಸೇವಾ ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ದಿನಾಚರಣೆ ಪ್ರಯುಕ್ತ ಕಾರ್ಕಳದ ಗೌರವಾನ್ವಿತ ವೈದ್ಯರಾದ ಡಾ. ಸಂಜಯ್, ಡಾ. ಕಾರ್ತಿಕ್ ರಾವ್, ಡಾ. ಸುಮಂಗಲಾ ರಾವ್ ಹಾಗೂ ಡಾ. ನಿತಿನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಗೌರವಧನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಂತ್ಯ 6ರ ಪ್ರಾಂತ್ಯಾಧ್ಯಕ್ಷ ಥೋಮಸ್ ಲುಕೋಸ್, ವಲಯಾಧ್ಯಕ್ಷ ಸುಧೀರ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯೆ ಜಯಂತಿ ಶೆಟ್ಟಿ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಗೋಪಾಲ್ ಅಂಚನ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ವೀಣಾ ಶೆಟ್ಟಿ ಧ್ವಜವಂದನೆ ನೆರವೇರಿಸಿದರು. ಕಾರ್ಯದರ್ಶಿ ನಿಹಾಲ್ ಶೆಟ್ಟಿ ಜಕ್ಕನ್ಮಕ್ಕಿ ವಂದಿಸಿದರು. ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.




