
ಕಾರ್ಕಳ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಹೇಳಿದರು. ಕಾರ್ಕಳದ ಕ್ರೈಸ್ಟ್ಕಿಂಗ್ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು, ಓದು ಅವರ ಭವಿಷ್ಯಕ್ಕೆ ಹೊಸ ದಾರಿ ತೋರಲಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಕ್ರೈಸ್ಟ್ಕಿಂಗ್ ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನ್ಯೂಸ್ ಕಾರ್ಕಳ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಬರೆಪ್ಪಾಡಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಕ್ರೈಸ್ಟ್ಕಿಂಗ್ ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ವೈದ್ಯರು, ಶಿಕ್ಷಕರು ಹಾಗೂ ಪತ್ರಕರ್ತರ ವೃತ್ತಿಯಲ್ಲಿ ಇಂದಿಗೂ ಸೇವಾಭಾವ ಉಳಿದಿದೆ ಎಂದರು. ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳ ಕುರಿತು ಅರಿವು ಹೊಂದುವುದು ಅಗತ್ಯವಾಗಿದ್ದು, ಬಾಲ್ಯದಿಂದಲೇ ಓದಿನ ಹವ್ಯಾಸ ಬೆಳೆಸಿಕೊಂಡರೆ ಪರೀಕ್ಷೆಯ ಭಯ ದೂರವಾಗಿ ಬದುಕಿನಲ್ಲಿ ಆತ್ಮವಿಶ್ವಾಸ ಮೂಡುತ್ತದೆ ಎಂದ ಅವರು, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಸತತ ಶೇ.100 ಫಲಿತಾಂಶ ದಾಖಲಿಸುತ್ತಿರುವ ಕ್ರೈಸ್ಟ್ಕಿಂಗ್ನ ಶೈಕ್ಷಣಿಕ ಸಾಧನೆ ಮುಂದುವರಿಯಲಿ ಎಂದು ಹಾರೈಸಿದರು. ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಧ್ಯಮಬಿಂಬ ಪತ್ರಿಕೆಯ ಸಂಪಾದಕ ವಸಂತ ಕುಮಾರ್ ಮಾತನಾಡಿ, ಸಮಾಜವನ್ನು ಜಾಗೃತಗೊಳಿಸುವ ಪತ್ರಕರ್ತರು ಸದಾ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಕಾರ್ಕಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಮ್ಮದ್ ಶರೀಫ್ ಮಾತನಾಡಿ, ಯುವಜನತೆ ಸುದ್ದಿ ಮಾಧ್ಯಮ ಮತ್ತು ಪತ್ರಿಕೋದ್ಯಮದತ್ತ ಆಕರ್ಷಿತರಾಗಬೇಕು, ಪತ್ರಿಕೋದ್ಯಮ ಅಪಾರ ಜೀವನಾನುಭವ ನೀಡುವ ಕ್ಷೇತ್ರವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ಕಿಂಗ್ ಎಜ್ಯುಕೇಶನ್ ಟ್ರಸ್ಟ್ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಮಾತನಾಡಿ, ಸಮಾಜದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿರುವ ಪತ್ರಕರ್ತರು ಸಮಾಜದ ತಪ್ಪು-ಒಪ್ಪುಗಳನ್ನು ತಿದ್ದುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದ್ದು, ಅವರಿಗೆ ವಿಶೇಷ ಗೌರವ ಸಲ್ಲಬೇಕು ಎಂದರು. ಬಳಿಕ ಪತ್ರಕರ್ತರು, ವರದಿಗಾರರು ಹಾಗೂ ಛಾಯಾಗ್ರಾಹಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್ ಪ್ರಸ್ತಾವನೆಗೈದರೆ, ಉಪಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಹಾಗೂ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಐ. ಕ್ರಿಸ್ಟೋಫರ್ ಕೋಟ್ಯಾನ್ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




