ಹೆಬ್ರಿ: ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿ ವೇದಿಕೆ ಹಾಗೂ ಸಾಮಾಜಿಕ ಸೇವಾ ಟ್ರಸ್ಟ್ ವತಿಯಿಂದ ಮಾಜಿ ಶಾಸಕ ದಿವಂಗತ ಗೋಪಾಲ ಭಂಡಾರಿಯವರ 75ನೇ ಜನ್ಮದಿನಾಚರಣೆ ಅಂಗವಾಗಿ ಚೈತನ್ಯ ಯುವ ವೃಂದದ ಸಭಾಭವನದಲ್ಲಿ ಸಾಧಕರ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ಗೋಪಾಲ ಭಂಡಾರಿಯವರು ಜನಸೇವೆಯ ಮೂಲಕ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದು, ಭೂಮಸೂದೆ ಕಾಯ್ದೆಯ ಮೂಲಕ ಸಾವಿರಾರು ಒಕ್ಕಲುಗಳಿಗೆ ಭೂಮಿ ನೀಡಿ ಬದುಕಿಗೆ ದಾರಿ ತೋರಿಸಿದ ಹೆಬ್ರಿಯ ಸಮಗ್ರ ಅಭಿವೃದ್ಧಿಯ ರೂವಾರಿ ಎಂದು ಬಣ್ಣಿಸಿದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮಾತನಾಡಿ, ಗೋಪಾಲ ಭಂಡಾರಿಯವರು ಸಾರ್ಥಕ ಜೀವನ ನಡೆಸಿದ ಅಪರೂಪದ ಆದರ್ಶ ವ್ಯಕ್ತಿತ್ವ ಎಂದು ಸ್ಮರಿಸಿದರು. ಟ್ರಸ್ಟ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ, ಗೋಪಾಲ ಭಂಡಾರಿಯವರು ಜನಸೇವೆಯಲ್ಲೇ ಸಂತೋಷ ಕಂಡ ಮಾನವೀಯ ರಾಜಕಾರಣಿಯಾಗಿದ್ದು, ಅವರ ಆದರ್ಶದಂತೆ ಟ್ರಸ್ಟ್ ಮೂಲಕ ಜನಸೇವೆ ಮುಂದುವರಿಸುವುದಾಗಿ ಹೇಳಿದರು. ಕಾರ್ಯಕ್ರಮಕ್ಕೂ ಮುನ್ನ ಗೋಪಾಲ ಭಂಡಾರಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಕ ನಾಗರಾಜ ಶೆಟ್ಟಿ, ಜೀವರಕ್ಷಕ ಈಶ್ವರ್ ಮಲ್ಪೆ, ಧಾರ್ಮಿಕ ಹಾಗೂ ಕಂಬಳ ಸಂಘಟಕ ಕಿರಣ್ ತೋಳಾರ್ ಬೇಳಂಜೆ, ಕೃಷಿ ಸಾಧಕ ಶಂಭು ನಾಯ್ಕ್, ಸಮಾಜಸೇವಕರಾದ ರಾಘವ ದೇವಾಡಿಗ, ಯಶೋದ ಶೆಟ್ಟಿ, ರೋನಿ ಮರ್ರೆ ಹಾಗೂ ನಿವೃತ್ತ ಸೈನಿಕ ಪ್ರಶಾಂತ ಪೂಜಾರಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸಂಸ್ಮರಣಾ ವಿಶೇಷ ಸನ್ಮಾನ ನಡೆಯಿತು. ಬೇಳಂಜೆ, ಹೆಬ್ರಿ, ಶಿವಪುರ, ಮುನಿಯಾಲು, ಕುಕ್ಕುಜೆ, ಅಜೆಕಾರು, ಮರ್ಣೆ, ಎಣ್ಣೆಹೊಳೆ, ಮುದ್ರಾಡಿ ಹಾಗೂ ಶಿರ್ಲಾಲು ಗ್ರಾಮಗಳ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಎಸ್ಎಸ್ಎಲ್ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಉದ್ಯಮಿ ಸತೀಶ್ ಪೈ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೃಷ್ಣ ಶೆಟ್ಟಿ, ಡಾ. ಶಿವಪುರ ಗೋಪಾಲ ಪೂಜಾರಿ, ಭಾನು ಭಾಸ್ಕರ್ ಸೇರಿದಂತೆ ಹಲವು ಗಣ್ಯರು, ಟ್ರಸ್ಟ್ ಪದಾಧಿಕಾರಿಗಳು, ಗೋಪಾಲ ಭಂಡಾರಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಹೆಬ್ರಿ ಪ್ರಸಾದ್ ಶೆಟ್ಟಿ ನಿರೂಪಿಸಿದರು, ನವೀನ್ ಕೆ. ಅಡ್ಯಂತಾಯ ಸ್ವಾಗತಿಸಿದರು ಹಾಗೂ ಎಚ್. ಜನಾರ್ಧನ್ ವಂದಿಸಿದರು.
