ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ಸೆಟ್) ಸಂಸ್ಥೆ, ಬ್ರಹ್ಮಾವರ ಆಶ್ರಯದಲ್ಲಿ ಫೋಟೋಗ್ರಫಿ ಮತ್ತು ವೀಡಿಯೋಗ್ರಫಿ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಶಿವರಾಮ್ ಎಂ. ಬಾಬು, ಐಎಫ್ಎಸ್, ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಆಸಕ್ತಿಯಿಂದ ತರಬೇತಿಯಲ್ಲಿ ಭಾಗವಹಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಜೀವನದಲ್ಲಿ ಯಶಸ್ಸು ಸಾಧಿಸಲು ಯಾವುದಾದರೂ ಒಂದು ಕ್ಷೇತ್ರದಲ್ಲಿ ಕೌಶಲ್ಯವನ್ನು ಸಂಪಾದಿಸಿ ಪಕ್ವತೆ ಹೊಂದುವುದು ಅತ್ಯಗತ್ಯವಾಗಿದ್ದು, ಬಯಸಿದ ಉದ್ಯೋಗ ಸಿಗದಿದ್ದರೂ ಕೌಶಲ್ಯದ ಮೂಲಕ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ಒಂದು ತಿಂಗಳ ಕಾಲ ಸಂಪೂರ್ಣ ಸಮರ್ಪಣೆಯಿಂದ ತರಬೇತಿ ಪಡೆದು ಯಶಸ್ವಿ ಉದ್ಯಮಿಗಳಾಗುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್ಸೆಟ್ ಸಂಸ್ಥೆಯ ನಿರ್ದೇಶಕ ಡಾ. ಬೊಮ್ಮಯ್ಯ ಎಂ. ಮಾತನಾಡಿ, ತರಬೇತಿಯನ್ನು ಶ್ರದ್ಧೆ ಮತ್ತು ಗಮನದಿಂದ ಕಲಿತರೆ ಆ ವಿದ್ಯೆ ಜೀವನಪೂರ್ತಿ ಕೈಹಿಡಿಯುತ್ತದೆ. ಸಂಸ್ಥೆಯಲ್ಲಿ ಪಡೆದ ಅನುಭವವನ್ನು ಇತರರೊಂದಿಗೆ ಹಂಚಿಕೊಂಡು ಗ್ರಾಮೀಣ ಯುವಜನರು ತರಬೇತಿ ಪಡೆದು ಆರ್ಥಿಕ ಪ್ರಗತಿ ಸಾಧಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು. ಉಪನ್ಯಾಸಕಿ ಶ್ರೀಮತಿ ಚೈತ್ರ ಕೆ. ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಹಿರಿಯ ಉಪನ್ಯಾಸಕರ ಸಹಾಯಕ ಶ್ರೀ ಸಂತೋಷ್ ವಂದಿಸಿದರು.
