
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲಿ ಬೃಹತ್ ಗಾತ್ರದ ದಂತದ ಗಂಡಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾಡಾನೆ ಕರೆಂಟ್ ಶಾಕ್ಗೆ ಬಲಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮೀಸಲು ಅರಣ್ಯದೊಳಗೆ ವಿದ್ಯುತ್ ಸಂಪರ್ಕ ಹೇಗೆ ಬಂದಿತು ಎಂಬ ಬಗ್ಗೆ ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಾಡಾನೆ ಮೃತಪಟ್ಟಿದ್ದ ಸ್ಥಳದಲ್ಲಿ ಪಂಚನಾಮೆ ನಡೆಸಲಾಗಿದೆ. ದಂತ ಹೊಂದಿದ್ದ ಬೃಹತ್ ಗಾತ್ರದ ಗಂಡಾನೆಯ ಸಾವಿನಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದ್ದು, ವಿದ್ಯುತ್ ಸಂಪರ್ಕ ಅರಣ್ಯದೊಳಗೆ ಹೇಗೆ ತಲುಪಿತು, ಇದು ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವಾಗಿ ಅಕ್ರಮ ವಿದ್ಯುತ್ ತಂತಿ ಅಳವಡಿಸಲಾಗಿತ್ತೇ ಎಂಬ ಎಲ್ಲ ಆಯಾಮಗಳಲ್ಲೂ ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.




