
ಕೊಪ್ಪಳ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಕುರಿತು ವಿರೋಧ ಪಕ್ಷಗಳು ಟೀಕೆ ನಡೆಸುತ್ತಿರುವ ನಡುವೆಯೇ ಕಾಂಗ್ರೆಸ್ನ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ತಮ್ಮದೇ ಸರ್ಕಾರದ ಯೋಜನೆಗಳ ಅನುಷ್ಠಾನದಲ್ಲಿನ ಲೋಪಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. “ಸರ್ಕಾರ ಅಂದಮೇಲೆ ನ್ಯೂನತೆಗಳು ಸಾಕಷ್ಟಿರುತ್ತವೆ” ಎಂದು ಹೇಳಿ, ಗೃಹಲಕ್ಷ್ಮಿ ಯೋಜನೆಯಡಿ ತಾಂತ್ರಿಕ ಹಾಗೂ ದಾಖಲಾತಿ ದೋಷಗಳಿಂದಾಗಿ ಸುಮಾರು 2 ಲಕ್ಷ ಅರ್ಹ ಮಹಿಳೆಯರಿಗೆ ಹಣ ತಲುಪುತ್ತಿಲ್ಲ ಎಂದು ತಿಳಿಸಿದರು. ಗೃಹಲಕ್ಷ್ಮಿ ಯೋಜನೆಯಡಿ ಒಟ್ಟು 1 ಕೋಟಿ 26 ಲಕ್ಷ ಫಲಾನುಭವಿಗಳಿಗೆ ಹಣ ನೀಡಬೇಕಾಗಿದ್ದು, ಪ್ರಸ್ತುತ 1 ಕೋಟಿ 24 ಲಕ್ಷ ಮಂದಿಗೆ ಮಾತ್ರ ಹಣ ಜಮೆಯಾಗುತ್ತಿದೆ. ಪ್ರತಿತಿಂಗಳು ಸುಮಾರು ₹2,500 ಕೋಟಿ ಹಣವನ್ನು ಯಾವುದೇ ಭ್ರಷ್ಟಾಚಾರವಿಲ್ಲದೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಹಲವು ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಹಾಗೂ ಗೃಹಜ್ಯೋತಿ ಯೋಜನೆಯಡಿ 1 ಕೋಟಿ 68 ಲಕ್ಷ ಫಲಾನುಭವಿಗಳ ಪೈಕಿ ಕೆಲವು ಸರ್ಕಾರಿ ನೌಕರರ ಮನೆಗಳಿಗೂ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತಿರುವುದು ಪತ್ತೆಯಾಗಿರುವ ಕಾರಣ ಅನರ್ಹರನ್ನು ಗುರುತಿಸಲು ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಹೇಳಿದರು. ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ ಸುಮಾರು ₹52 ಸಾವಿರ ಕೋಟಿ ವೆಚ್ಚ ಮಾಡುವುದು ಸರ್ಕಾರದ ಬದ್ಧತೆಯಾಗಿದ್ದು, ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೂ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವ ಬದ್ಧತೆ ಅವರಿಗಿದೆ. ಇದು ಯಾವುದೇ ವ್ಯಕ್ತಿಯ ವೈಯಕ್ತಿಕ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿದ್ದು, ಯಾರೇ ಮುಖ್ಯಮಂತ್ರಿ ಆದರೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿರೋಧ ಪಕ್ಷದವರು ಸರಿಯಾದ ಅಧ್ಯಯನವಿಲ್ಲದೆ ಆರೋಪ ಮಾಡುತ್ತಿದ್ದಾರೆ, ಸರ್ಕಾರವನ್ನು ಎಲ್ಲಿ ಪ್ರಶ್ನಿಸಬೇಕೋ ಅಲ್ಲಿ ಪ್ರಶ್ನಿಸುತ್ತಿಲ್ಲ ಎಂದು ಟೀಕಿಸಿದರು. ಜೊತೆಗೆ ಇನ್ನೊಂದು ವಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಉತ್ತಮ ಆಡಳಿತ ನೀಡಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.




