
ಉಡುಪಿ: ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲೆಯ ನೇತೃತ್ವದಲ್ಲಿ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ 1.11 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ “ವಯೋವಂದನ ಆತಿಥ್ಯ ಗೃಹ” ಯೋಜನೆ ಹಿರಿಯ ನಾಗರಿಕರ ಬದುಕಿನ ಸಂಧ್ಯಾಕಾಲಕ್ಕೆ ಆಸರೆಯಾಗಲಿದ್ದು, ಯೋಜನೆಯ ನಿರ್ಮಾಣ ಕಾರ್ಯದಿಂದ ಹಿಡಿದು ಮುಂದಿನ ನಿರ್ವಹಣೆಯವರೆಗೆ ಸಮಾಜದ ಸಂಪೂರ್ಣ ಸಹಭಾಗಿತ್ವ ಅಗತ್ಯವಾಗಿದೆ ಎಂದು ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ನೂತನ ವಿಶ್ವಸ್ಥ ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್ ಹೇಳಿದರು. ಜೂನ್ 28ರಂದು ಉಡುಪಿಯ ಶ್ರೀ ಪದ್ಮಾವತಿ ಸಭಾಭವನದಲ್ಲಿ ನಡೆದ ನಿರ್ಮಾಣ ಯೋಜನೆಯ ವಿವಿಧ ಸಮಿತಿಗಳ ರಚನೆ ಹಾಗೂ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆ ಕಳೆದ 14 ವರ್ಷಗಳಿಂದ ಸಮಾಜ ಸಂಘಟನೆ ಹಾಗೂ ಸಮಾಜಮುಖಿ ಸೇವೆಗಳ ಮೂಲಕ ಸಮಾಜದ ಎಲ್ಲಾ ವರ್ಗದವರ ವಿಶ್ವಾಸ ಮತ್ತು ಪ್ರೀತಿಯನ್ನು ಗಳಿಸಿದ್ದು, ಎಲ್ಲ ಅಡೆತಡೆಗಳು ಹಾಗೂ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಮಾಜಕ್ಕೆ ಅತ್ಯಗತ್ಯವಾದ ಹಿರಿಯ ನಾಗರಿಕರ ನೆಮ್ಮದಿಯ ತಾಣವನ್ನು ನಿರ್ಮಿಸಿ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಈ ಮಹತ್ವಾಕಾಂಕ್ಷಿ ಯೋಜನೆಗೆ ವೈಯಕ್ತಿಕವಾಗಿ ಹಾಗೂ ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ವತಿಯಿಂದ ಸಂಪೂರ್ಣ ಸಹಕಾರ ಮತ್ತು ಸಹಭಾಗಿತ್ವ ನೀಡುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ಸಂಸ್ಥಾಪಕರಾದ ಸಿಎ ಗೋಪಾಲಕೃಷ್ಣ ಭಟ್ ಹಾಗೂ ಮೂಡಬಿದ್ರೆಯ ವಿಜಯಕುಮಾರ್ ಶೆಣೈ ಅವರು ವಯೋವಂದನ ಯೋಜನೆಯ ಕಟ್ಟಡ ನಿರ್ಮಾಣದ ಪೂರ್ವಸಿದ್ಧತೆ, ಯೋಜನೆಯ ವಿನ್ಯಾಸ, ನಿರ್ಮಾಣ ವೆಚ್ಚ ಮತ್ತು ಮುಂದಿನ ನಿರ್ವಹಣೆಯ ಖರ್ಚು-ವೆಚ್ಚದ ವಿವರಗಳನ್ನು ದೃಶ್ಯ-ಶ್ರಾವ್ಯ ಮಾಧ್ಯಮದ ಮೂಲಕ ವಿವರಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸಮಿತಿಗಳನ್ನು ರಚಿಸಿ, ಕಟ್ಟಡ ನಿರ್ಮಾಣ ಯೋಜನಾ ಸಮಿತಿಯ ಅಧ್ಯಕ್ಷರಾಗಿ ಬೆಂಗಳೂರಿನ ಮಹಾಲಸಾ ಎಲೆಕ್ಟ್ರಿಕಲ್ ಸಂಸ್ಥೆಯ ಮಾಲಕರಾದ ವಿಜಯಕುಮಾರ್ ಶೆಣೈ ಅವರನ್ನು ನೇಮಕ ಮಾಡಲಾಗಿದ್ದು, ಕಾಪುವಿನ ಹರೀಶ್ ನಾಯಕ್, ಕೆ.ಸಿ. ಕಾಮತ್ ಹಾಗೂ ಬಾಲಕೃಷ್ಣ ಶೆಣೈ (ಮಣಿಪಾಲ) ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಹಣಕಾಸು ಹಾಗೂ ಲೆಕ್ಕಪತ್ರ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರಾಗಿ ಸಿಎ ಗೋಪಾಲಕೃಷ್ಣ ಭಟ್ ಅವರನ್ನು, ಗೌರವ ಸಲಹೆಗಾರರಾಗಿ ಮಂಗಳೂರಿನ ಸಿಎ ಎಸ್.ಎಸ್. ನಾಯಕ್ ಅವರನ್ನು ಹಾಗೂ ಸಂಚಾಲಕರಾಗಿ ನಾಗೇಶ್ ಕಾಮತ್, ಮೋಹನದಾಸ ಶಾನುಭಾಗ್ ಮತ್ತು ಅಜಿತ್ ಶೆಣೈ (ಉಡುಪಿ) ಅವರನ್ನು ನೇಮಿಸಲಾಯಿತು. ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಂಗ್ರಹಣೆ ಮತ್ತು ಮೇಲ್ವಿಚಾರಣಾ ಸಮಿತಿಯ ಸಂಚಾಲಕರಾಗಿ ಬೆಳ್ಮಣ್ ವೆಂಕಟರಾಯ ಕಾಮತ್ ಹಾಗೂ ಮೂಡಬಿದ್ರೆಯ ರಘುವೀರ್ ಶೆಣೈ ಅವರಿಗೆ ಜವಾಬ್ದಾರಿ ವಹಿಸಲಾಯಿತು. ಕಟ್ಟಡ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ಬೆಳ್ಮಣ್ ಕಾಮಾಕ್ಷಿ ಕನ್ಸ್ಟ್ರಕ್ಷನ್ ಸಂಸ್ಥೆಯ ಸುಧೀರ್ ಕಾಮತ್ ಅವರಿಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಎಜಿಎಂ ಅಶೋಕ್ ನಾಯಕ್, ನಿವೃತ್ತ ಬ್ಯಾಂಕರ್ ಲಕ್ಷ್ಮೀನಾರಾಯಣ ನಾಯಕ್ ದಂಪತಿ, ಶ್ರೀ ಲಕ್ಷ್ಮಿ ವೆಂಕಟೇಶ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವತಿಯಿಂದ ನಿವೃತ್ತ ಬ್ಯಾಂಕರ್ ಶ್ರೀನಿವಾಸ್ ಭಟ್ ನೇತೃತ್ವದ ತಂಡ ಹಾಗೂ ಯು.ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಶ್ವಸ್ಥರಾದ ಪಾಂಗಾಳ ಸಿಎ ಸುರೇಶ್ ನಾಯಕ್ ಮತ್ತು ಸಿಎ ಗುಜ್ಜಾಡಿ ಪ್ರಭಾಕರ್ ನಾಯಕ್ ಅವರು ವಯೋವಂದನ ಯೋಜನೆಯ ಕೊಠಡಿ ನಿರ್ಮಾಣಕ್ಕಾಗಿ ತಲಾ ₹8 ಲಕ್ಷ ಮೊತ್ತದ ದೇಣಿಗೆ ಚೆಕ್ಕುಗಳನ್ನು ವೇದಿಕೆಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿ ಡಾ. ರಾಜ್ ಗೋಪಾಲ್ ಶೆಣೈ ಹಾಗೂ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಸಿಎ ಎಸ್.ಎಸ್. ನಾಯಕ್ ಮಾತನಾಡಿದರು. ವೇದಿಕೆಯಲ್ಲಿ ಉಡುಪಿಯ ಖ್ಯಾತ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಶೆಣೈ, ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ವಿಶ್ವಸ್ಥ ತೋನ್ಸೆ ರಾಮರಾಯ ಕಿಣಿ, ಉಡುಪಿ ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನದ ವಿಶ್ವಸ್ಥ ಮಹೇಶ್ ಶೆಣೈ, ಯುವಕ ಮಂಡಳಿಯ ಅಧ್ಯಕ್ಷ ನಿತೇಶ್ ಶೆಣೈ ಹಾಗೂ ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದ ಮಹಿಳಾ ಮಂಡಳಿಯ ಅಧ್ಯಕ್ಷೆ ಸೀಮಾ ಎಸ್. ಪೈ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಪರಿಕಲ್ಪನೆ ಹಾಗೂ ಸಂಯೋಜನೆಯಲ್ಲಿ ಪ್ರಕಟಗೊಂಡಿರುವ “ಡಾ. ಪಿ. ದಯಾನಂದ ಪೈ – ಸಾರ್ಥಕ ಬದುಕಿನ ಸಾಕ್ಷಾತ್ಕಾರ” ಕೃತಿಯ ಸಂಪಾದಕಿಯಾಗಿರುವ ಕಾರ್ಕಳದ ಲೇಖಕಿ ಪ್ರಜ್ವಲಾ ಶೆಣೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವೇದಮೂರ್ತಿ ಶ್ರೀಚೇಂಪಿ ರಾಮಚಂದ್ರ ಅನಂತ ಭಟ್ಟರು ಮಾತನಾಡಿ, ವೇದಿಕೆಯ ಮಹತ್ವಾಕಾಂಕ್ಷಿ ಯೋಜನೆಗೆ ಸಮಾಜದ ದಾನಿಗಳಿಂದ ಈಗಾಗಲೇ ಉತ್ತಮ ಸ್ಪಂದನೆ ದೊರೆತಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಪೂರ್ಣಗೊಂಡು ಸಮಾಜದ ಹಿರಿಯ ನಾಗರಿಕರಿಗೆ ಈ ಯೋಜನೆ ನೆಮ್ಮದಿಯ ಆಶ್ರಯವಾಗಲಿ ಎಂದು ಹಾರೈಸಿದರು. ಜಿಎಸ್ಬಿ ಸಮಾಜ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಜಿ. ಸತೀಶ್ ಹೆಗಡೆ ಸ್ವಾಗತಿಸಿದರು. ವೇದಿಕೆಯ ಸಂಚಾಲಕ ಆರ್. ವಿವೇಕಾನಂದ ಶೆಣೈ ಪ್ರಸ್ತಾವನೆಗೈದರೆ, ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಕಾಪು ಹರೀಶ್ ನಾಯಕ್ ವಂದನಾರ್ಪಣೆ ಸಲ್ಲಿಸಿದರು.




