
ಕಾರ್ಕಳ: ಮಾನವನಿಗೆ ಉತ್ತಮ ಆರೋಗ್ಯವೇ ಅಮೂಲ್ಯ ಸಂಪತ್ತಾಗಿದ್ದು, ನಮ್ಮ ಪ್ರಾಚೀನ ಆಹಾರ ಪದ್ಧತಿ, ಮಿತಾಹಾರ, ನಿಯಮಿತ ವ್ಯಾಯಾಮ, ಯೋಗ ಹಾಗೂ ಸತ್ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ವೃದ್ಧಾಪ್ಯದಲ್ಲಿಯೂ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಖ್ಯಾತ ವೈದ್ಯ ಹಾಗೂ ಪರಿಸರ ತಜ್ಞ ಡಾ. ಸತ್ಯನಾರಾಯಣ ಭಟ್ ಹೇಳಿದರು.
ಕಾರ್ಕಳ ತಾಲೂಕು ಹಿರಿಯ ನಾಗರಿಕರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ವಕೀಲ ವಿಜೇಂದ್ರ ಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಕಾನೂನು ಅರಿವು ಹೊಂದಿರುವುದು ಅಗತ್ಯ. ಇದರಿಂದ ಆಸ್ತಿ ಖರೀದಿ, ಮಾರಾಟ ಹಾಗೂ ವಿಲ್ ಬರೆಯುವ ಸಂದರ್ಭಗಳಲ್ಲಿ ಉಂಟಾಗಬಹುದಾದ ಅನಗತ್ಯ ವಿವಾದಗಳಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ. ಕಮಲಾಕ್ಷ ಕಾಮತ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಜಯರಾಮ ಕಾಮತ್ ಪ್ರಾರ್ಥನೆ ನೆರವೇರಿಸಿದರು. ಪ್ರದೀಪ್ ನಾಯಕ ಹಾಗೂ ಕೇಶವ ನಂಬಿಯಾರ್ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಕಾರ್ಯದರ್ಶಿ ಜಗದೀಶ ಗೋಖಲೆ ವಂದನಾರ್ಪಣೆ ಸಲ್ಲಿಸಿದರೆ, ಕಾರ್ಯಕ್ರಮವನ್ನು ಶ್ರೀಮತಿ ಶೈಲಜಾ ಹೆಗಡೆ ನಿರೂಪಿಸಿದರು.




