
ಕಾರ್ಕಳ: ಕಾರ್ಕಳ ಪುರಸಭೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ತಡರಾತ್ರಿವರೆಗೆ ಸಭೆಯಲ್ಲಿ ಉಳಿಸಿಕೊಂಡು, ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಯೋಜನಾ ನಿರ್ದೇಶಕ ಸುಬ್ರಮಣ್ಯ ಸೆಟ್ಟಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ದೂರು ಸಲ್ಲಿಸಲಾಗಿದೆ.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ನಿಕಟ ಪೂರ್ವ ಪುರಸಭಾ ಸದಸ್ಯ ಶುಭದರಾವ್ ಅವರು ಸಲ್ಲಿಸಿರುವ ಮನವಿಯಲ್ಲಿ, ಜೂನ್ 24ರಂದು ಸಂಜೆ 5.15ಕ್ಕೆ ಕಾರ್ಕಳ ಪುರಸಭೆಗೆ ಆಗಮಿಸಿದ ಯೋಜನಾ ನಿರ್ದೇಶಕ ಸುಬ್ರಮಣ್ಯ ಸೆಟ್ಟಿ ನೇತೃತ್ವದ ತಂಡವು ಕಚೇರಿ ಸಮಯ ಮುಗಿದ ಬಳಿಕವೂ ಸಿಬ್ಬಂದಿಯನ್ನು ತೆರಳಲು ಅವಕಾಶ ನೀಡದೆ ಸಭೆ ನಡೆಸಿದೆ ಎಂದು ಆರೋಪಿಸಲಾಗಿದೆ. ಸಭೆಯ ವೇಳೆ ವಿವರಣೆ ನೀಡುತ್ತಿದ್ದ ಮಹಿಳಾ ಸಿಬ್ಬಂದಿಯನ್ನು ಏಕವಚನದಲ್ಲಿ ನಿಂದಿಸಿ, ಅವಮಾನಿಸಿ, “ಕೆಲಸದಿಂದಲೇ ಕಿತ್ತುಹಾಕುತ್ತೇನೆ” ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಾತ್ರಿ 8.30 ಆದರೂ ಮಹಿಳಾ ಸಿಬ್ಬಂದಿ ಮನೆಗೆ ಮರಳದ ಕಾರಣ ಕುಟುಂಬಸ್ಥರು ಪುರಸಭೆಗೆ ಬಂದು ವಿಚಾರಿಸಿದ ಬಳಿಕ ಸಭೆ ಮುಕ್ತಾಯಗೊಂಡಿತ್ತೆಂದು ಹೇಳಲಾಗಿದೆ. ಅಧಿಕಾರಿಗಳು ತಮ್ಮ ಸರ್ಕಾರಿ ವಾಹನಗಳಲ್ಲಿ ತೆರಳಿದರೆ, ದೂರದ ಗ್ರಾಮಗಳಿಗೆ ತೆರಳಬೇಕಿದ್ದ ಮಹಿಳಾ ಸಿಬ್ಬಂದಿ ಬಸ್ ಸೌಲಭ್ಯವಿಲ್ಲದೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀಯ ಸಾರ್ವಜನಿಕರು ವಾಹನ ವ್ಯವಸ್ಥೆ ಮಾಡಿ ಮನೆ ತಲುಪಲು ನೆರವಾದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ಅಧಿಕಾರಿ ಈ ಹಿಂದೆಯೂ ಹಲವು ಬಾರಿ ಪುರಸಭೆಯ ಮಹಿಳಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ತಮ್ಮ ಕಚೇರಿಗೆ ಕರೆಸಿ ನಿಂದಿಸಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಮಹಿಳಾ ಸಿಬ್ಬಂದಿಯ ಗೌರವ ಮತ್ತು ಸುರಕ್ಷತೆಯನ್ನು ಪರಿಗಣಿಸಿ ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಮಹಿಳಾ ಆಯೋಗವನ್ನು ಮನವಿಯಲ್ಲಿ ಒತ್ತಾಯಿಸಲಾಗಿದೆ.




