
ಕಾರ್ಕಳ: ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ), ಜೆಸಿಐ ಕಾರ್ಕಳ ಹಾಗೂ ವಿವಿಧ ದಾನಿಗಳ ಸಹಯೋಗದಲ್ಲಿ ಕಾರ್ಕಳ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಈ ವರ್ಷ ಒಟ್ಟು 25 ಲಕ್ಷ ರೂ. ವಿದ್ಯಾರ್ಥಿವೇತನ ವಿತರಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಬೈಲೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಹಂತವಾಗಿ ಸುಮಾರು 6.5 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರು, ಶಿಕ್ಷಣವು ಮಾನವನ ಮೂಲಭೂತ ಅವಶ್ಯಕತೆಯಾಗಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳೂ ಸಿಇಟಿ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜದ ಬೆಂಬಲ ಅಗತ್ಯವಾಗಿದ್ದು, ಅಮ್ಮನ ನೆರವು ಸಂಸ್ಥೆಯ ಮೂಲಕ ಅವಿನಾಶ್ ಜಿ. ಶೆಟ್ಟಿ ಅವರು ಸಮಾಜಕ್ಕೆ ಮಾದರಿಯಾದ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ನೀಡುವ ನೆರವು ಆರೋಗ್ಯಪೂರ್ಣ ಹಾಗೂ ಅಭಿವೃದ್ಧಿಶೀಲ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದರು. ಇದೇ ವೇಳೆ ಬೈಲೂರು ಸರ್ಕಾರಿ ಕಾಲೇಜಿನ ಟಾಪರ್ ವಿದ್ಯಾರ್ಥಿಗಳಿಗೆ ದೇಶಾ ಫೌಂಡೇಶನ್ ವತಿಯಿಂದ ನೀಡಲಾದ 1.05 ಲಕ್ಷ ರೂ. ಮೊತ್ತದ ಆರು ವಿದ್ಯಾರ್ಥಿವೇತನಗಳನ್ನು ಡಾ. ಮೋಹನ್ ಆಳ್ವ ಹಾಗೂ ಶಾಸಕ ವಿ. ಸುನೀಲ್ ಕುಮಾರ್ ವಿತರಿಸಿದರು. ತುಳು ಚಿತ್ರರಂಗದ ಖ್ಯಾತ ನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಬ್ಬ ಕಲಾವಿದ ಅಡಗಿದ್ದು, ಕಲೆಯನ್ನು ನಂಬಿ ಬದುಕುವವರನ್ನು ಕಲೆ ಎಂದಿಗೂ ಕೈಬಿಡುವುದಿಲ್ಲ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಕಾಲೇಜಿನ ಡಾ. ಗಣನಾಥ ಶೆಟ್ಟಿ, ತುಳು ಸಿನಿಮಾ ವಿತರಕ ಸಚಿನ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸಂತೋಷ್ ವಾಗ್ಲೆ, ಸಮಾಜಸೇವಕ ಸುಮಿತ್ ಬೈಲೂರು, ಪ್ರಾಂಶುಪಾಲ ಸೀತಾರಾಮ, ಉಪಪ್ರಾಂಶುಪಾಲ ನಾಗರಾಜ್ ಹಾಗೂ ಎಸ್ಡಿಎಂಸಿ ಅಧ್ಯಕ್ಷ ಸ್ಟೀವನ್ ಡಿಸೋಜಾ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅಮ್ಮನ ನೆರವು ಫೌಂಡೇಶನ್ನ ಪ್ರವರ್ತಕ ಅವಿನಾಶ್ ಜಿ. ಶೆಟ್ಟಿ ದಾನಿಗಳ ಸಹಕಾರವನ್ನು ಸ್ಮರಿಸಿದರು. ಫೌಂಡೇಶನ್ ಮಾರ್ಗದರ್ಶಕ ವಸಂತ್ ಎಂ. ಸ್ವಾಗತಿಸಿದರು. ಶಿಕ್ಷಕ ರಾಜೇಂದ್ರ ಭಟ್ ಕೆ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




