
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಶಕ್ತಿ’ ಯೋಜನೆಯ ದುರ್ಬಳಕೆಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಯೋಜನೆ ಜಾರಿಯಾದ ಬಳಿಕ ನಕಲಿ ದಾಖಲೆಗಳನ್ನು ಬಳಸಿ ಬೇರೆ ರಾಜ್ಯಗಳ ಮಹಿಳೆಯರು ಉಚಿತ ಬಸ್ ಪ್ರಯಾಣ ಸೌಲಭ್ಯ ಪಡೆಯುತ್ತಿರುವ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ನಿಜವಾದ ಫಲಾನುಭವಿಗಳನ್ನು ಗುರುತಿಸಲು ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ. ಹೊಸ ವ್ಯವಸ್ಥೆಯ ಪ್ರಕಾರ ರಾಜ್ಯದ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಹೊಂದಿರುವ ಮಹಿಳೆಯರು ಹಾಗೂ ತೃತೀಯ ಲಿಂಗಿಗಳಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು. ಅರ್ಜಿದಾರರು ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಸಲ್ಲಿಸಿ ಉಚಿತವಾಗಿ ಸ್ಮಾರ್ಟ್ ಕಾರ್ಡ್ ಪಡೆಯಬಹುದಾಗಿದೆ. ಕಾರ್ಡ್ನಲ್ಲಿ ಹೆಸರು, ಭಾವಚಿತ್ರ, ವಿಳಾಸ ಹಾಗೂ ಆಧಾರ್ ವಿವರಗಳು ನಮೂದಾಗಲಿದ್ದು, ಅದನ್ನು ಇತರರಿಗೆ ವರ್ಗಾಯಿಸಲು ಅವಕಾಶ ಇರುವುದಿಲ್ಲ. ರಾಜ್ಯಾದ್ಯಂತ ಸುಮಾರು 3 ಕೋಟಿ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಮೊದಲು ಬಿಎಂಟಿಸಿ ವ್ಯಾಪ್ತಿಯಲ್ಲಿ ಜಾರಿಗೆ ತರಲಾಗುತ್ತಿದ್ದು, ಬಳಿಕ ಕೆಎಸ್ಆರ್ಟಿಸಿ ಸೇರಿದಂತೆ ಉಳಿದ ಸಾರಿಗೆ ನಿಗಮಗಳಿಗೂ ವಿಸ್ತರಿಸಲಾಗುವುದು. ಬಿಎಂಟಿಸಿ ಈಗಾಗಲೇ 11 ಸಾವಿರ ಸುಧಾರಿತ ಇಟಿಎಂ ಯಂತ್ರಗಳನ್ನು ಖರೀದಿಸಿದ್ದು, ಎನ್ಎಫ್ಸಿ ತಂತ್ರಜ್ಞಾನ ಹೊಂದಿರುವ ಈ ಸ್ಮಾರ್ಟ್ ಕಾರ್ಡ್ಗಳನ್ನು ಬಸ್ಗಳ ಜೊತೆಗೆ ‘ನಮ್ಮ ಮೆಟ್ರೋ’ ಸೇವೆಯಲ್ಲೂ ಬಳಸಲು ಅವಕಾಶ ಕಲ್ಪಿಸಲಾಗುತ್ತದೆ. ಬೆಂಗಳೂರು ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಸೈಬರ್ ಸೆಂಟರ್ಗಳು ಹಾಗೂ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬಹುದಾಗಿದೆ. ಸರ್ಕಾರದ ಈ ಕ್ರಮದಿಂದ ಯೋಜನೆಯ ದುರ್ಬಳಕೆ ತಡೆಯುವ ಜೊತೆಗೆ ನಿಜವಾದ ಫಲಾನುಭವಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.




