
ಅವಳಿಗೆ ಇತ್ತೀಚೆಗೆ ನನ್ನ ಬಗ್ಗೆ ಕೇರ್ ಕಡಿಮೆ ಆಗ್ತಾ ಇದೆ. ತಾನು ಪ್ರೀತಿಸಿದ ಹುಡುಗಿಯ ಬಗ್ಗೆ ಇಂತಹದ್ದೊಂದು ಕಂಪ್ಲೇಂಟ್ ತೆಗೆದುಕೊಂಡು ಹುಡುಗನೊಬ್ಬ ಬಂದಿದ್ದ. ಕೇರ್ ಇಲ್ಲ ಅಂದ್ರೆ ಏನು ಎಂದು ಕೇಳಿದೆ. ತಕ್ಷಣ ಆತ ಮೊಬೈಲ್ ತೆರೆದು ಅವನ ಹುಡುಗಿ ಮತ್ತು ಆತನ ನಡುವೆ ಹರಿದಾಡಿದ ಮಸೇಜ್ಗಳನ್ನು ತೋರಿಸಿದ. ನೋಡಿ ರಾಘುಜೀ ಇದು ನಾನು ಕಳುಹಿಸಿದ ಮಸೇಜ್, ಅದು ಅವಳದ್ದು. ಈಗ ನನ್ನ ಐದು ಮೆಸೇಜ್ಗಳು ಹೇಗಿವೆ ನೋಡಿ. ಇತ್ತೀಚೆಗೆ ಬೇಕೋ ಬೇಡ್ವೋ ಎಂಬ ರೀತಿಯಲ್ಲಿ ಕಳುಸುತ್ತಿದ್ದಾಳೆ.. ಒಂದು ಕ್ಷಣ ನಾವು ಎಷ್ಟು ಯಾಂತ್ರಿಕವಾಗಿ ಬದುಕುತ್ತಿದ್ದೇವೆ ಎಂದು ಅನಿಸಿತು. ಹೃದಯದ ಕದ ತಟ್ಟಿ, ಮನಸಿನ ಮಾಳಿಗೆಯೊಳಗೆ ಹೋಗಿ ಕಣ್ಣಲ್ಲಿ ಕಣ್ಣಿಟ್ಟು ‘ನಿಜ ನೀನು ನನ್ನ ಪ್ರೀತಿಸ್ತೀಯಾ ತಾನೆ’ ಅಂತ ಸಾವಿರ ಸಲ ಕೇಳಿ ಕಣ್ತುಂಬಿಕೊಂಡು ಭಾವನೆಗಳನ್ನು, ಪರಸ್ಪರ ಪ್ರೀತಿ ಕಾಳಜಿಯನ್ನ ತೋರಿಸಬೇಕಾದವರು ಹೀಗೆ ಮೆಸೇಜ್ಗಳಲ್ಲಿ, ಭಾವನೆಗಳನ್ನ, ಕೇರ್ನ್ನ ಹುಡುಕುವ ಮಟ್ಟಕ್ಕೆ ಬಂದಿದೆಯೆಂದರೆ ನಾವು ನಮ್ಮ ಬದುಕನ್ನ ಅದೆಷ್ಟು ಯಾಂತ್ರಿಕವಾಗಿರಿಸಿಕೊಂಡಿದ್ದೇವೆ ಅಲ್ವಾ? ಬಿಡಿ. ನಾವು ಇನ್ನೂ ಅದರಿಂದ ಹೊರಬರಲಾರದಷ್ಟು ದೂರ ಹೋಗಿ ಬಿಟ್ಟಿದ್ದೇವೆ. ಮೊನ್ನೆ ಆ ಹುಡುಗ ತೋರಿಸಿದ ಮೆಸೇಜ್ಗಳನ್ನ ನೋಡಿದವನಿಗೆ ಅವನು ಹೇಳಿದ್ದರಲ್ಲಿ ತಪ್ಪಿಲ್ಲ ಅನಿಸಿತು. ಆ ಹುಡುಗಿ ಮೊದಲಿಗೆ ತುಂಬ ಚೆಂದನೆಯ ಸಂದೇಶ ಕಳುಹಿಸಿದ್ದಳು. ಇತ್ತೀಚಿನ ಸಂದೇಶಗಳನ್ನ ನೋಡಿದರೆ, ಅವನು ಹೇಳಿದಂತೆ ಕೇರ್ಲೆಸ್ ಆಗಿದ್ದಿದ್ದು ನಿಜ. ಒಂದು ವಿಷಯವನ್ನ ಗಮನಿಸಬೇಕು. ನಾವು ಎಲ್ಲೆ ಇದ್ದರೂ, ಎಷ್ಟು ಹೊತ್ತಿಗಾದರೂ ಮೊಬೈಲ್ಗೆ ಸಿಗುತ್ತೇವೆ ಅನ್ನೋದಿದೆಯಲ್ಲ, ಅದು ಬೇರೆಯವರಿಗೆ ಬೇಗ ನಾವು ಬೋರಾಗುವಂತೆ ಮಾಡುತ್ತದೆ! ಹಾಗೆ ನಾವು ಬೇರೆಯವರಿಗೆ ಬೋರ್ ಆಗುವ ಸೂಚನೆ ಕೂಡ ಸಿಕ್ಕಿರುತ್ತದೆ. ನಾವು ಅದನ್ನ ಗಮನಿಸಿರುವುದಿಲ್ಲ. ಉದಾಹರಣೆ ಕೊಡ್ತೀನಿ ನೋಡಿ. ಗುಡ್ ಮಾರ್ನಿಂಗ್ ರಾಘು ಅಂತ ಬರುತ್ತಿದ್ದ ಮೆಸೇಜ್ ಕ್ರಮೇಣ ಗುಡ್ ಮಾರ್ನಿಂಗ್ ಆಗುತ್ತದೆ. ಆಮೇಲೆ ಬರೀ Gm. ಆಗ ಅರ್ಥಮಾಡಿಕೊಳ್ಳಬೇಕು, ಅತ್ತಲಿನ ವ್ಯಕ್ತಿಗೆ ನಾವು ಬೋರಾಗುತ್ತಿದ್ದೇವೆ ಅಂತ. ಕ್ರಮೇಣ ಮೆಸೇಜ್ಗಳು ಬರುವುದು ನಿಂತು ಹೋಗುತ್ತದೆ. ಇದು ಯಾರೋ ಒಬ್ಬರು ಮಾಡುತ್ತಾರೆ ಎಂದಲ್ಲ. ಬಹುತೇಕ ಎಲ್ಲರು ಹಾಗೆಯೇ. ಯಾಕೆಂದರೆ ಮೊಬೈಲ್ ಸಂಬಂಧಗಳನ್ನ ಬೆಸೆಯುತ್ತದೆಯೇ ಹೊರತು ಗಟ್ಟಿಗೊಳಿಸಲಾರದು. ಇಷ್ಟರ ಮೇಲೆ ಇನ್ನೊಂದು ವಿಷಯವನ್ನ ಹೇಳಬೇಕಿದೆ. ನನ್ನ ಓದುಗರು ಸಾಕಷ್ಟು ಜನ ಪ್ರತಿ ಬೆಳಿಗ್ಗೆ, ರಾತ್ರಿ ಗುಡ್, ಮಾರ್ನಿಂಗ್, ಗುಡ್ ನೈಟ್ ಅಂತ ಕಳುಹಿಸುತ್ತಾರೆ. ನಾನು ಅವರಿಗೆ ಉತ್ತರಿಸುವ ಪ್ರಯತ್ನ ಖಂಡಿತ ಮಾಡುತ್ತೇನೆ. ಯಾಕಂದ್ರೆ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳುವುದು ಸಭ್ಯತೆ. ಸ್ಪಂದನೆಗೆ ಪ್ರತಿ ಸ್ಪಂದನೆ ಇರಬೇಕು. ಆ ಕ್ಷಣಕ್ಕೆ ಅಲ್ಲದಿದ್ದರೂ ನಾನು ಬಿಡುವಾದಾಗ ಎಲ್ಲಾ ಸಂದೇಶಗಳಿಗು ಉತ್ತರಿಸುತ್ತೇನೆ. ಹಾಗೆ ಮಾಡದಿದ್ದರೆ ಉದ್ಧಟತನ ಎನಿಸುಕೊಳ್ಳುತ್ತದೆ. ನೀವಾದರು ಅಷ್ಟೆ, ನಿಮ್ಮ ಸ್ನೇಹಿತರ ಹಾರೈಕೆಗೆ ಸ್ಪಂದಿಸಿ. ಚಾಟಿಂಗ್ ಬೋರಾದರೂ ಬಾಂಧ್ಯವ್ಯ ಬೋರಾಗಬಾರದು. ನಿಮ್ಮ ಗೆಳೆಯ/ಗೆಳತಿ ಯಾರೋ ಗುಡ್ನೈಟ್ ಅಂತ ಕಳುಹಿಸಿದ್ದರೆ ನೀವು ಪ್ರತಿಯಾಗಿ ಹೇಳಬೇಕು ತಾನೆ. ಸುಮ್ಮನಿದ್ದು ಬಿಟ್ರೆ ಹೇಗೆ…? ಆರಂಭದ ದಿನದಲ್ಲಿ ಐವತ್ತು ಮೆಸೇಜ್ ಮಾಡಿ, ಈಗ ಮೌನವಾದ್ರೆ ನೀವು ಟೈಂಪಾಸ್ ಗಿರಾಕಿ ಅಂತ ಅನ್ಸಲ್ವಾ ಸ್ನೇಹಿತರೇ? ಅದೇ ಹೊಸ ನಂಬರ್ನಿಂದ ನಿಮಗೊಂದು ಸಂದೇಶ ಬಂದ್ರೆ Who is this? ಅಂತ ತಕ್ಷಣ ರಿಪ್ಲೇ ಕಳುಹಿಸುತ್ತೀರಿ. ನೀವೇ ಹೇಳಿ ಇದು ಸರೀನಾ..? ನಾನು ಈಗಾಗಲೇ ಹೇಳಿದಂತೆ ನಾವು ಕಳುಹಿಸೋ ಸಂದೇಶಗಳಿಂದ ನಾವೇನು ಅನ್ನೋದು ಗೊತ್ತಾಗುತ್ತದೆ. ಅಪರಿಚಿತರ ಜೊತೆ ಮಾತಾಡುವುದಕ್ಕಿಂತಲೂ ಈಗಾಗಲೇ ಗೊತ್ತಿರೋ ಗೆಳೆಯರ ಭಾವನೆಗಳಿಗೆ ಸ್ಪಂದಿಸುವುದು ಉತ್ತಮ. ಏನಂತೀರಾ?




